Archive for the ‘Uncategorized’ Category

ಭವಿಷ್ಯದ ಮೊಬೈಲ್ ವಿನ್ಯಾಸಗೊಳಿಸಿ – ಹತ್ತು ಲಕ್ಷ ರೂ. ಬಹುಮಾನ ಗೆಲ್ಲಿರಿ

March 19, 2010

ಇದು ಮೊಬೈಲ್ ಯುಗ, ಮೊಬೈಲ್ ಫೋನ್ ಇಲ್ಲದ ಒಂದು ದಿನವನ್ನೂ ಊಹಿಸುವುದು ಕಷ್ಟ. ಭಿಕ್ಷುಕನಿಂದ ಕೋಟ್ಯಾಧಿಪತಿಯ ಜೇಬಿಗೆ ತಕ್ಕನಾದ ಹತ್ತು ಹಲವು ಬಗೆಯ ವಿನ್ಯಾಸಗಳು. ಪ್ರತಿದಿನ ಮಾರುಕಟ್ಟೆಗೆ ಲಗ್ಗೆಯಿಡುತ್ತಿರುವ ನೂರಾರು ಹೊಸ ವಿನ್ಯಾಸಗಳು ಗ್ರಾಹಕನನ್ನು ತಬ್ಬಿಬ್ಬುಗೊಳಿಸುತ್ತವೆ. ಒಂದು ಮೊಬೈಲಿನಲ್ಲಿರುವ ವೈಶಿಷ್ಟ್ಯ ಇನ್ನೊಂದರಲ್ಲಿ ಇರುವುದಿಲ್ಲ. ನೂತನ ಮೊಬೈಲುಗಳಲ್ಲಿ ಅಡಕವಾಗಿರುವ ಎಷ್ಟೋ ವೈಶಿಷ್ಟ್ಯಗಳ ಬಗ್ಗೆ ಗ್ರಾಹಕನಿಗೆ ಅರಿವೇ ಇರುವುದಿಲ್ಲ. ಹಾಗಾಗಿ ಹೊಸ ಹೊಸ ಮೊಬೈಲುಗಳು ಮಾರುಕಟ್ಟೆಗೆ ಆಗಮಿಸುತ್ತಿದ್ದಂತೆ ಕೊಂಚ ಹಿಂದಿನ ದಿನ ಬಿಡುಗಡೆಯಾದ ಮೊಬೈಲ್ ಮಾರಾಟವಾಗದೇ ಉಳಿದು ನಷ್ಟವಾಗುವ ಸಾಧ್ಯತೆಗಳೇ ಹೆಚ್ಚು.

ಈ ನಿಟ್ಟಿನಲ್ಲಿ ಗ್ರಾಹಕರೇ ತಮಗೆ ಸೂಕ್ತವೆಸಿನಿದ ವಿನ್ಯಾಸವನ್ನು ರಚಿಸಿ ಬೇಕಾದ ವೈಶಿಷ್ಟ್ಯಗಳನ್ನು ಅಳವಡಿಸಿಕೊಳ್ಳುವಂತೆ ಮಾಡಿ ಕೇವಲ ಅತ್ಯುತ್ತಮ ಮಾದರಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಯೋಜನೆಯನ್ನು ಖ್ಯಾತ ಸಂಸ್ಥೆ ಎಲ್.ಜಿ. ಹಮ್ಮಿಕೊಂಡಿದೆ.

ಈ ನಿಟ್ಟಿನಲ್ಲಿ ಗ್ರಾಹಕರೇ ಮೊಬೈಲ್ ಫೋನ್ ವಿನ್ಯಾಸಗೊಳಿಸುವ ಸ್ಪರ್ಧೆಯೊಂದನ್ನು ಸಂಸ್ಥೆ ಏರ್ಪಡಿಸಿದೆ. ಎಲ್.ಜಿ. ಡಿಸೈನ್ ದ ಫ್ಯೂಚರ್ ಎಂಬ ಹೆಸರಿನ ಈ ಸ್ಪರ್ಧೆಯಲ್ಲಿ ಒಟ್ಟು ನಲವತ್ತು ಬಹುಮಾನಗಳಿದ್ದು ಅತ್ಯುತ್ತಮ ಮಾದರಿಯ ಮೊಬೈಲ್ ಫೋನ್ ವಿನ್ಯಾಸಕ್ಕೆ ಇಪ್ಪತ್ತು ಸಾವಿರ ಡಾಲರ್ (ಸುಮಾರು ಹತ್ತು ಲಕ್ಷ ರೂಪಾಯಿ) ಬಹುಮಾನವನ್ನು ಘೋಷಿಸಲಾಗಿದೆ.

ಬಹುಮಾನದ ವಿವರಗಳು ಈ ಕೆಳಗಿನಂತಿವೆ:

ಪ್ರಥಮ ಬಹುಮಾನ : ಇಪ್ಪತ್ತು ಸಾವಿರ ಡಾಲರ್ (ಸುಮಾರು ಹತ್ತು ಲಕ್ಷ ರೂ) + ನಲವತ್ತೆರೆಡು ಸಾವಿರ ರೂ ಮೌಲ್ಯದ ಲ್ಯಾಪ್ ಟಾಪ್ ಮತ್ತು ಸಾಫ್ಟ್ ವೇರ್ (ಆಟೋಡೆಸ್ಕ್ ಇಂಡಸ್ಟ್ರಿಯಲ್ ಡಿಸೈನ್)

ಎರಡನೆಯ ಬಹುಮಾನ: ಹತ್ತು ಸಾವಿರ ಡಾಲರ್ (ಸುಮಾರು ಐದು ಲಕ್ಷ ರೂ) + ಐದು ಸಾವಿರ ರೂ ಮೌಲ್ಯದ ಸಾಫ್ಟ್ ವೇರ್ (ಆಟೋಡೆಸ್ಕ್ ಸ್ಕೆಚ್ಬುಕ್ ಪ್ರೋ)

ಮೂರನೆಯ ಬಹುಮಾನ : ಐದು ಸಾವಿರ ಡಾಲರ್ (ಸುಮಾರು ಎರೆಡೂವರೆ ಲಕ್ಷ ರೂ) + ಐದು ಸಾವಿರ ರೂ ಮೌಲ್ಯದ ಸಾಫ್ಟ್ ವೇರ್ (ಆಟೋಡೆಸ್ಕ್ ಸ್ಕೆಚ್ಬುಕ್ ಪ್ರೋ)

ವಿಮರ್ಶಕರ ಮೆಚ್ಚುಗೆ ಗಳಿಸಿದ ಅತ್ಯುತ್ತಮ ವಿನ್ಯಾಸಕ್ಕೆ : ಮೂರು ಸಾವಿರ ಡಾಲರ್ (ಸುಮಾರು ಒಂದೂವರೆ ಲಕ್ಷ ರೂ) + ಐದು ಸಾವಿರ ರೂ ಮೌಲ್ಯದ ಸಾಫ್ಟ್ ವೇರ್ (ಆಟೋಡೆಸ್ಕ್ ಸ್ಕೆಚ್ಬುಕ್ ಪ್ರೋ) + ನಾಲ್ಕು ಸಾವಿರ ಡಾಲರ್ (ಸುಮಾರು ಎರಡು ಲಕ್ಷ ರೂ) ಮೌಲ್ಯದ ಉಪಕರಣ

ಮೂವತ್ತೇಳು ಸಮಾಧಾನಕರ ಬಹುಮಾನಗಳು: ತಲಾ ಒಂದು ಸಾವಿರ ಡಾಲರ್ (ಸುಮಾರು ಐವತ್ತು ಸಾವಿರ ರೂ)

ಮೊಬೈಲು ವಿನ್ಯಾಸಗೊಳಿಸಲು ಹೆಚ್ಚು ಹೆಣಗಬೇಕಾದ ಅವಶ್ಯಕತೆಯಿಲ್ಲ. ಎಲ್.ಜಿ. ಸಂಸ್ಥೆಯ ಈ ಕೆಳಗಿನ ತಾಣಕ್ಕೆ ಭೇಟಿ ನೀಡಿ ಹೊಸ ವಿನ್ಯಾಸ ರಚನೆಯನ್ನು ಕ್ರಮಾಂತರವಾಗಿ (ಸ್ಟೆಪ್ ಬೈ ಸ್ಟೆಪ್) ರಚಿಸಿಕೊಳ್ಳಬಹುದು.

http://www.crowdspring.com/project/2283311_lg-design-the-future-competition/access/

ಸ್ಪರ್ಧೆಗೆ ಪ್ರವೇಶಗಳನ್ನು ಸ್ವೀಕರಿಸಲು ಅಂತಿಮ ದಿನಾಂಕ ಏಪ್ರಿಲ್ ೨೬, ೨೦೧೦. ವಿಜೇತರ ಪ್ರಕಟಣೆ ಮೇ ೧೪ ರಂದು. ವಿಜೇತರ ಪಟ್ಟಿಯನ್ನು ಈ ಕೆಳಗಿನ ತಾಣದಲ್ಲಿ ಪ್ರಕಟಿಸಲಾಗುವುದು: http://www.crowdspring.com/LG/winners.

ಮತ್ತೇಕೆ ತಡ, ನಿಮ್ಮ ಮೆದುಳಿಗೆ ಕೊಂಚ ಕೆಲಸ ನೀಡಿ. ಭವಿಷ್ಯದಲ್ಲಿ ನಮ್ಮ ಕೈಗಳಲ್ಲಿ ಬರುವ ಮೊಬೈಲ್ ನಿಮ್ಮದೇ ವಿನ್ಯಾಸವಾಗಿರವಬಹುದು. ಒಂದು ವೇಲೆ ಬಹುಮಾನ ಗೆದ್ದರೆ ಮಾತ್ರ ನನಗೊಂದು ಪಾರ್ಟಿ ಕೊಡಲು ಮರೆಯದಿರಿ. ಅರ್ಶದ್ ಹುಸೇನ್ ಎಂ.ಹೆಚ್, ದುಬೈ.

ಎರೆಡು ರೂಪಾಯಿ ಡಾಕ್ಟ್ರು

August 31, 2009

– ಅರ್ಶದ್ ಹುಸೇನ್ ಎಂ.ಹೆಚ್. ದುಬೈ.

ಪ್ರಥಮ ಭೇಟಿಗೆ ಈ ಡಾಕ್ಟ್ರು ವಿಧಿಸುವುದು ಎರೆಡು ರೂಪಾಯಿ, ಎರಡನೆಯ ಭೇಟಿಗೆ?…. ಒಂದು ರೂಪಾಯಿ

ಲಕ್ಷಗಟ್ಟಲೇ ಡೊನೇಶನ್ ನೀಡಿ ಎಂಬಿಬಿಎಸ್ ಮಾಡಿ ಲಕ್ಷಗಟ್ಟಲೇ ಕಮಾಯಿಸುವ ನಿಟ್ಟಿನಲ್ಲಿ ವೈದ್ಯರಾಗುವವರ ಇಂದಿನ ದಿನಗಳಲ್ಲಿ ಯಾರಾದರೂ ಬಡವರ ಸೇವೆ ಮಾಡುತ್ತೇನೆ, ಹಳ್ಳಿಗೆ ಹೋಗುತ್ತೇನೆ ಎಂದರೆ ನಗುವವರ ಸಂಖ್ಯೆಯೇ ಹೆಚ್ಚು.

ಆದರೆ ಕಳೆದ ಇಪ್ಪತ್ತನಾಲ್ಕು ವರ್ಷಗಳಿಂದ ಮಹಾರಾಷ್ಟ್ರದ ಅತ್ಯಂತ ಹಿಂದುಳಿದ ಪ್ರದೇಶವಾದ ಮೇಲ್ಘಾಟ್ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ರವೀಂದ್ರ ಕೊಯ್ಲೆ ನಿಜಕ್ಕೂ ಅಭಿನಂದನಾರ್ಹರು.

ಎಂ.ಬಿ.ಬಿ.ಎಸ್ ಮತ್ತು ಎಂ.ಡಿ. ಪದವಿಗಳನ್ನು ಪಡೆದ ಡಾ. ರವೀಂದ್ರ ಮನಸ್ಸು ಮಾಡಿದ್ದರೆ ನಗರದಲ್ಲಿದ್ದು ಲಕ್ಷಗಟ್ಟಲೇ ದುಡಿಯಬಹುದಿತ್ತು. ಆದರೆ ಗಾಂಧೀಜಿ ಮತ್ತು ವಿನೋಬಾ ಭಾವೆಯವರ ಅಪ್ಪಟ ಅಭಿಮಾನಿಯಾದ ಅವರು ವಿದ್ಯಾರ್ಥಿದೆಸೆಯಲ್ಲಿದ್ದಾಗ ಓದಿದ್ದ ರಸ್ಕಿನ್ ಬಾಂಡ್ ರವರ ವಾಕ್ಯಗಳು ಅವರ ಜೀವನದ ಮೇಲೆ ಗಾಢ ಪ್ರಭಾವ ಬೀರಿದ್ದವು. ’ನಿಮಗೆ ನಿಜವಾಗಿಯೂ ಜನಸೇವೆ ಮಾಡಬೇಕೆಂದಿದ್ದರೆ ಮೊದಲು ಅತ್ಯಂತ ಬಡವರಿಗೆ ಹಾಗೂ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾದವವ ನಡುವೆ ಕಾರ್ಯನಿರ್ವಹಿಸಿ’ ಎಂದು ರಸ್ಕಿನ್ ಬಾಂಡ್ ಕರೆಯಿತ್ತಿದ್ದರು. ಆಗ ನಾಗಪುರ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದ ಡಾ. ರವೀಂದ್ರ ಪದವಿ ಪಡೆದ ಬಳಿಕ ವೈದ್ಯಕೀಯ ಸೇವೆ ಅತ್ಯಂತ ದುರ್ಲಭವಾದೆಡೆ ತನ್ನ ಸೇವೆ ಮುಡಿಪು ಎಂದು ಸಂಕಲ್ಪಮಾಡಿಕೊಂಡಿಟ್ಟು ಬಿಟ್ಟಿದ್ದರು.

ಎಂ.ಬಿ.ಬಿ.ಎಸ್. ಪದವಿ ಪಡೆದ ಬಳಿಕ ಅವರು ಮಹಾರಾಷ್ಟ್ರ್‍ಅ, ಗುಜರಾತ್ ಮತ್ತು ಮಧ್ಯಪ್ರದೇಶದ ಗ್ರಾಮಪ್ರದೇಶಗಳಿಗೆ ಭೇಟಿ ನೀಡಿ ಕಡೆಗೆ ಮಹಾರಾಷ್ಟ್ರದ ಗಾದ್ರಿಚೋಲಿ ಎಂಬ ಪ್ರದೇಶದಲ್ಲಿ ತಮ್ಮ ಸೇವೆ ಆರಂಭಿಸಿದರು. ಆದರೆ ಆ ಪ್ರದೇಶದಲ್ಲಿ ನಕ್ಸಲರ ಕಾಟ ಅತಿಯಾಗಿದ್ದು ತನ್ನ ಮಗನ ಕ್ಷೇಮದ ಕಾಳಜಿ ವಹಿಸಿದ ಅವರ ತಾಯಿ ಅಷ್ಟೇ ಹಿಂದುಳಿದ ಪ್ರದೇಶವಾದ ಆದರೆ ಸುರಕ್ಷಿತವಾದ ಮೇಲ್ಘಾಟ್ ಎಂಬಲ್ಲಿ ಅವರ ಸೇವೆ ನೀಡಲು ಆಗ್ರಹಿಸಿದ್ದರು. ತಮ್ಮ ತಾಯಿಯ ಹಿತವಚನಗಳನ್ನು ಶಿರಾವಹಿಸಿದ ಡಾ. ರವೀಂದ್ರ ಮೇಲ್ಘಾಟಿನಲ್ಲಿ ತಮ್ಮ ಸೇವೆ ಆರಂಭಿಸಿದರು.

ಸುಮಾರು ಒಂದೂವರೆ ವರ್ಷ ತನ್ನ ಸೇವೆಯನ್ನು ಅಲ್ಲಿನ ಜನತೆಗೆ ನೀಡಿದ ಡಾ. ರವೀಂದ್ರರಿಗೆ ಅಲ್ಲಿನ ಜನಗಳಿಗೆ ಕೇವಲ ಮಾತ್ರೆ, ಇಂಜೆಕ್ಷನ್ನುಗಳ ವೈದ್ಯಕೀಯ ಸೇವೆ ಮಾತ್ರವಲ್ಲದೇ ಸಾಮಾಜಿಕ ಕಾಳಜಿಯ ಸಾಂತ್ವಾನವೂ ಅವಶ್ಯಕವಿದೆ ಎಂದು ಮನಗಂಡಿತ್ತು. ನಂತರ ನಾಗಪುರಕ್ಕೆ ಹಿಂದಿರುಗಿ ’ರಕ್ಷಣಾತ್ಮಕ ಮತ್ತು ಸಾಮಾಜಿಕ ವೈದ್ಯಶಾಸ್ತ್ರ’ ಎಂಬ ವಿಷಯದಲ್ಲಿ (MD in preventive and social medicine) ಎಂ.ಡಿ. ಪದವಿಯನ್ನು ಪಡೆದು ಮೇಲ್ಘಾಟಿಗೆ ಹಿಂದಿರುಗಿದರು.

ಅಂದಿನಿಂದ ಸತತವಾಗಿ ಹಿಂದುಳಿದ ಜನರಿಗೆ ಮತ್ತು ಬುಡಕಟ್ಟು ಜನಾಂಗದವರಿಗೆ ವೈದ್ಯಕೀಯ ಮತ್ತು ಸಾಮಾಜಿಕ ಸೇವೆಯನ್ನು ನೀಡುತ್ತಾ ಬಂದಿದ್ದಾರೆ. ಅವರು ಈ ಸೇವೆ ಪ್ರಾರಂಭಿಸಿ ಇಂದಿಗೆ ಇಪ್ಪತ್ತನಾಲ್ಕು ವರ್ಷ ಕಳೆದವು. ಇಂದಿಗೂ ಅವರು ತಮ್ಮ ರೋಗಿಗಳಿಂದ ವಸೂಲು ಮಾಡುವ ಮೊತ್ತ ಮೊದಲನೆಯ ಭೇಟಿಗೆ ಎರೆಡು ರೂ ! ಹಾಗೂ ಮುಂದಿನ ಭೇಟಿಗೆ ಒಂದು ರೂ ! ಆರಂಭಿಕ ದಿನಗಳಲ್ಲಿ ಧರ್ನಿಯಿಂದ ನಲವತ್ತು ಕಿ.ಮೀ. ದೂರವಿರುವ ಬೈರಗಡ ಎಂಬಲ್ಲಿ ಕಾಲ್ನಡಿಗೆಯಿಂದಲೇ ಕ್ರಮಿಸುತ್ತಿದ್ದ ಅವರಿಗೆ ದಾರಿಯಲ್ಲಿ ತಿಂಗಳಿಗೆ ಕನಿಷ್ಟ ಒಂದಾದರೂ ಹುಲಿಯ ದರ್ಶನವಾಗುತ್ತಿತ್ತು. ಕಳೆದ ಮೂರು ವರ್ಷಗಳಿಂದ ಒಂದೂ ಹುಲಿಯನ್ನು ತಾನು ಕಂಡಿಲ್ಲ ಎಂದು ಡಾ. ರವೀಂದ್ರ ತಿಳಿಸುತ್ತಾರೆ.

ಆ ಪ್ರದೇಶದಲ್ಲಿ ವಾಸವಾಗಿರುವ ಕೋರ್ಕು ಎಂಬ ಬುಡಕಟ್ಟು ಜನಾಂಗದ ರಕ್ಷಣೆಗಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳದ ಸರ್ಕಾರದ ವಿರುದ್ಧ ಒಮ್ಮೆ ಕೋರ್ಟು ಮೆಟ್ಟಿಲನ್ನೂ ಹತ್ತಿದ್ದರು.

ಡಾ. ರವೀಂದ್ರರಿಗೆ ಜೈ ಹೋ! ಎನ್ನೋಣವೇ

Dr. Raveendra koelhe

Dr. Raveendra koelhe

ವಿಶ್ವದ ಅತ್ಯಂತ ಕಿರಿಯ ಬಾಡಿ ಬಿಲ್ಡರ್ – ಆದಿತ್ಯ ’ರೋಮಿಯೋ’ ದೇವ್

March 20, 2009

 

mini-muscleman-001ಬಾಡಿ ಬಿಲ್ಡರ್ ಎಂದಾಕ್ಷಣ ಚರ್ಮವನ್ನು ಬಿರಿದು ಹೊರಬರುತ್ತಿರುವ ಮಾಂಸಖಂಡಗಳ ಪರ್ವತವೇ ಎದುರಾದಂತೆ ಕಾಣುವ ಭೀಮಾಕಾಯ ಕಣ್ಣಪರದೆಯ ಮುಂದೆ ಬರುತ್ತದೆ.  ಈ ರೂಪದ ಹೃಸ್ವ ಸ್ವರೂಪ ಹೇಗಿರಬಹುದು?

ಇದಕ್ಕೆ ಉತ್ತರ ಆದಿತ್ಯ ’ರೋಮಿಯೋ’ ದೇವ್

ಉತ್ತರ ಭಾರತದ ಫಗ್ವಾರಾ ನಗರದಲ್ಲಿರುವ ಆದಿತ್ಯ ದೇವ್ ಅವರ ಎತ್ತರ ಕೇವಲ ಎರಡಡಿ ಒಂಭತ್ತುಇಂಚು ಮಾತ್ರ. ಭಾರ ಕೇವಲ ಒಂಭತ್ತು ಕೇಜಿ.  ಆದರೆ ಇವರು ಒಂದೂವರೆ ಕೇಜಿಯ ಡಂಬೆಲ್ಲುಗಳನ್ನು ಲೀಲಾಜಾಲವಾಗಿ ಎತ್ತಬಲ್ಲರು, ಉತ್ತಮ ದೇಹದಾರ್ಢ್ಯ ಹೊಂದಿರುವ ಯಾವುದೇ ವಯಸ್ಕರು ಮಾಡಬಹುದಾದ ವ್ಯಾಯಾಮವನ್ನೂ ಮಾಡಬಲ್ಲರು. ಈ ಸಾಧನೆ ಈಗ ಅವರಿಗೆ ವಿಶ್ವದಲ್ಲಿಯೇ ಅತಿಕಿರಿಯ ಬಾಡಿಬಿಲ್ಡರ್ ಎಂಬ ಪಟ್ಟವನ್ನು ತಂದುಕೊಟ್ಟಿದೆ. 

ಫಗ್ವಾರಾದ ಜಿಮ್ ಒಂದರಲ್ಲಿ ಪ್ರತಿದಿನ ಇವರು ವ್ಯಾಯಾಮ ಮಾಡುವುದನ್ನು ನೋಡಲೆಂದೇ ಸಾವಿರಾರು ಜನರು ಆಗಮಿಸಿದ್ದು ಒಂದು ಅಭಿಮಾನಿ ಬಳಗವೇ ಹುಟ್ಟಿಕೊಂಡಿದೆ. ಅಭಿಮಾನಿಗಳು ಪ್ರೀತಿಪೂರ್ವಕವಾಗಿ ರೋಮಿಯೋ ಎಂಬ ಅನ್ವರ್ಥನಾಮವನ್ನೂ ಅವರ ಹೆಸರಿನ ನಡುವೆ ಜೋಡಿಸಿದ್ದಾರೆ.

ಇತರ ಕುಬ್ಜದೇಹಿಗಳಂತಲ್ಲದೇ ಅವರ ದೇಹದ ಅಂಗಾಂಗಗಳು ಅವರ ಗಾತ್ರಕ್ಕೆ ತಕ್ಕ ಪ್ರಮಾಣದಲ್ಲಿವೆ.  ಹಲವು ವರ್ಷಗಳಿಂದ ಅವರಿಗೆ ತರಬೇತಿ ನೀಡುತ್ತಿರುವ ರಣಜೀತ್ ಪಾಲ್ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ.  ಈಗಾಗಲೇ ಹಲವಾರು ಟೀವಿ ಕಾರ್ಯಕ್ರಮಗಳಲ್ಲಿ ತಮ್ಮ ಪ್ರದರ್ಶನ ನೀಡಿರುವ ಇವರು ಟೀವಿಯಲ್ಲಿ ನಿರೂಪಕರಾಗಿ ಉದ್ಯೋಗ ನಿರ್ವಹಿಸುವ ಕನಸು ಕಾಣುತ್ತಿದ್ದಾರೆ.  

ಪ್ರಸ್ತುತ ಕೇವಲ ದೇಹಪ್ರದರ್ಶನ ಹಾಗೂ ಟೀವಿ ಕಾರ್ಯಕ್ರಮಗಳಿಂದ ಸಾಕಷ್ಟು ಹಣ ಗಳಿಸಬಹುದಾದರೂ ಶ್ರೀಮಂತರಾಗುವ ಇಚ್ಛೆ ಅವರಿಗಿಲ್ಲ. ಸರಳ ಜೀವನ ಹಾಗೂ ವಿಶ್ವದ ಎಲ್ಲೆಡೆಗಳಲ್ಲಿ ಪ್ರವಾಸ ಮಾಡುವ ಹಾಗೂ ಲಂಡನ್ ನಗರದಲ್ಲಿ ಅವರ ಅಚ್ಚುಮೆಚ್ಚಿನ ಜಾಝ್-ಬಿ ತಂಡದೊಂದಿಗೆ ಸಂಗೀತ ಕಾರ್ಯಕ್ರಮ ನೀಡುವ ಹೆಬ್ಬಯಕೆ ಅವರದ್ದು.

ಥಾಯ್ಲೆಂಡ್: ತೆಂಗಿನಕಾಯಿ ಕೀಳುವ ಮಂಗನಿಂದ ಮಾಲೀಕನ ಕೊಲೆ

March 13, 2009

ಥಾಲ್ಲೆಂಡ್, ಮಾರ್ಚ್ ೧೩:  ಭಾರತದ ಕೇರಳದಲ್ಲಿ ಹಾಗೂ ಇನ್ನೂ ಹಲವೆಡೆ ತೆಂಗಿನಮರದಿಂದ ತೆಂಗಿನಕಾಯಿಗಳನ್ನು ಉದುರಿಸಲು ಮಂಗಗಳಿಗೆ ತರಬೇತಿ ನೀಡಲಾಗಿರುತ್ತದೆ. ಈ ಮಂಗಗಳು ಲೀಲಾಜಾಲವಾಗಿ ಮರಹತ್ತಿ ಪಕ್ವವಾದ ತೆಂಗಿನಕಾಯಿಗಳನ್ನು ಗುರುತಿಸಿ ಅವುಗಳನ್ನು ತಿರುಚಿ ಕೆಳಕ್ಕೆಸೆಯುವ ಅಧ್ಬುತ ಸಾಮರ್ಥ್ಯ ಪಡೆದಿರುತ್ತವೆ.

ತೆಂಗಿನ ಕಾಯಿ ನಮ್ಮ ಅಂಡಮಾನ್ ನಿಕೋಬಾರ್ ದ್ವೀಪಗಳಿಗೆ ನಿತ್ಯಾಧಾರವಾಗಿರುವಂತೆಯೇ ಪೂರ್ವದ ಥಾಯ್ಲೆಂಡಿಗೂ ಸಹಾ.  ಅಲ್ಲಿಯೂ ತೆಂಗಿನಕಾಯಿ ಕೀಳುವವರಿಗೆ ಬರ. ಆದ್ದರಿಂದ ತೆಂಗಿನ ಕಾಯಿ ಕೀಳುವ ಮಂಗಗಳಿಗೆ ಭಾರೀ ಬೇಡಿಕೆ. ಈ ಬೇಡಿಕೆಯ ಮೂಲಕ ಮಂಗಗಳಿಗೂ ದುಬಾರಿ ಬೆಲೆ.

 

ಕಳೆದ ವರ್ಷ ಥಾಯ್ಲೆಂಡಿನ ನಾಕೋರಾನ್ ಶ್ರೀ ಥಮಾರಾಟ್ ಎಂಬಲ್ಲಿ ವಾಸವಾಗಿದ್ದ ಲೀಲಿಟ್ ಜಾಂಛೂಮ್ ಎಂಬ ನಲವತ್ತೆಂಟು ವರ್ಷದ ಕೃಷಿಕರೊಬ್ಬರು ನೂರಾಮೂವತ್ತು ಡಾಲರ್ ತೆತ್ತು ತರಬೇತುಗೊಂಡ ಮಂಗವೊಂದನ್ನು ಖರೀದಿಸಿ ಬ್ರದರ್ ಕ್ವಾನ್ ಎಂದು ಹೆಸರಿಟ್ಟಿದ್ದರು. ತಮ್ಮ ತೋಟಗಳ ತೆಂಗಿನಕಾಯಿಗಳನ್ನು ಕೀಳುವುದು ಮಾತ್ರವಲ್ಲದೇ ಅಕ್ಕಪಕ್ಕದ ತೋಟಗಳಿಂದ ಕಾಯಿ ಕೀಳಲು ಪ್ರತಿ ಕಾಯಿಗೆ ನಾಲ್ಕು ಪೆನ್ನಿಯಂತೆ ಬಾಡಿಗೆಗೂ ದುಡಿಸಿಕೊಳ್ಳುತ್ತಿದ್ದರು.

ಸುಮಾರು ಒಂದು ವರ್ಷ ಯಾವುದೇ ತಕರಾರಿಲ್ಲದೆ ಕೆಲಸ ಮಾಡಿದ ಮಾರುತಿಗೆ ಸ್ವಲ್ಪ ವಿಶ್ರಾಂತಿ ಬೇಕಿತ್ತೇನೋ, ಆದರೆ ಹಣ ಎಣಿಸುತ್ತಿದ್ದ ಮಾಲಿಕನಿಗೆ ಅದರ ಅಳಲು ಅರ್ಥವಾಗಬೇಕಲ್ಲ, ಇನ್ನಷ್ಟು ಕಾಯಿಗಳನ್ನು ಉದುರಿಸುವಂತೆ ಮಾರುತಿಯನ್ನು ಹುರಿದುಂಬಿಸುತ್ತಿದ್ದರು. ಅಲ್ಲದೇ ಮರವನ್ನೇರಲು ನಿರಾಕರಿಸಿದರೆ ಏಟುಗಳ ಶಿಕ್ಷೆಯನ್ನೂ ನೀಡಲಾಗುತ್ತಿತ್ತು. 

 

ಕಳೆದ ಮಾರ್ಚ್ ಹನ್ನೊಂದನೇ ತಾರೀಖಿಗೆ ಅದೇ ಪ್ರಕಾರ ಕಾಯಿ ಕೀಳೆಂದು ಪೀಡಿಸಿದ ಮಾಲಿಕನ ಮೇಲೆ ಮಾರುತಿ ದಪ್ಪನಾದ ತೆಂಗಿನಕಾಯಿಯೊಂದನ್ನು ನೇರ ತಲೆಯ ಮೇಲೆ ಬೀಳುವಂತೆ ಎಸೆದಿತ್ತು.  ನೇರವಾಗಿ ಆಗಸದಿಂದ ನೆತ್ತಿಗೆ ಬಿದ್ದ ಹೊಡೆತಕ್ಕೆ ಕಿಮಕ್ ಕಮ್ಮಕ್ ಎನ್ನದೇ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.  

ಸ್ಥಳದಲ್ಲಿಯೇ ಉಪಸ್ಥಿತರಿದ್ದವರು ಮಂಗ ಉದ್ದೇಶಪೂರ್ವಕವಾಗಿಯೇ ಮಾಲಿಕನ ತಲೆಯ ಮೇಲೆ ತೆಂಗಿನ ಕಾಯಿ ಎಸೆದು ಕೊಲೆ ಮಾಡಿದೆ ಎಂದು ಆರೋಪಿಸಿದ್ದಾರೆ.  ಮೃತನ ಪತ್ನಿ ಮಂಗ ತಮ್ಮೊಂದಿಗೆ ಕಳೆದವರ್ಷದಿಂದಲೂ ಸ್ನೇಹದಿಂದಿದ್ದು ಈಗ ಕೆಲಸದ ಒತ್ತಡ ಅದಕ್ಕೆ ಈರೀತಿ ಮಾಡಲು ಪ್ರೇರೇಪಿಸಿರಬಹುದೆಂದು ತಿಳಿಸಿದ್ದಾರೆ.

ಮಂಗನಿಗೆ ಕೊಲೆ ಆರೋಪ ಹೊರಿಸಲಾಗುತ್ತದೆಯೇ? ಹೊರಿಸಿದರೂ ಯಾವ ಸೆಕ್ಷನ್ ಹಾಕಲಾಗುತ್ತದೆ ಎಂಬುದು ಈಗ ಕಾಡುತ್ತಿರುವ ಪ್ರಶ್ನೆಯಾಗಿದೆ. ಆದರೆ ಕೊಲೆ ಮಾಡಿದ ಮಾರುತಿ ನಿರಾಳವಾಗಿ ಕುಳಿತಿದೆ.

ಜಾರ್ಜಿಯಾ: ಜೈಲಿನಿಂದ ಆರಾಮವಾಗಿ ಪಾರಾದ, ಮತ್ತೆ ಹಿಂದಿರುಗಿದಾಗ ಸಿಕ್ಕಿಬಿದ್ದ

March 10, 2009

ಜಾರ್ಜಿಯಾ, ಮಾರ್ಚ್ ೧೦: ಜೈಲಿನಲ್ಲಿ ಕೊಳೆಯುತ್ತಿರುವವರು ತಾವು ಯಾವಾಗ ಜೈಲಿನಿಂದ ಪಾರಾಗುತ್ತೇವೆಯೋ ಎಂದು ಜಾತಕಪಕ್ಷಿಯಂತೆ ಕಾಯುತ್ತಿರುತ್ತಾರೆ. ಆದರೆ ಅಮೇರಿಕಾದ ಜಾರ್ಜಿಯಾ ರಾಜ್ಯದ ವುಡ್ ಬೈನ್ ಎಂಬ ಪಟ್ಟಣದ ಜೈಲೊಂದರಲ್ಲಿ ಕೈದಿಯಾಗಿದ್ದ ಹ್ಯಾರಿ ಜಾಕ್ಸನ್ ಎಂಬ ಇಪ್ಪತ್ತೈದು ವರ್ಷದ ತರುಣನೊಬ್ಬನಿಗೆ ಸಿಗರೇಟು ಸೇದುವ ಹಂಬಲ ತಡೆಯಲಾಗದೇ ಹೇಗೋ ಜೈಲಿನ ಬಂಧನವನ್ನು ಪಾರಾಗಿ ಹೊರಬಂದಿದ್ದ.

woodbineಬಂದವ ಸುಮ್ಮನೇ ಪರಾರಿಯಾಗಬಾರದೇ, ಅದುಬಿಟ್ಟು ಸಮೀಪದ ಅಂಗಡಿಗೆ ನುಗ್ಗಿ ಹದಿನಾಲ್ಕು ಪ್ಯಾಕೆಟ್ ಸಿಗರೇಟುಗಳನ್ನು ಕದ್ದು ಮತ್ತೆ ಜೈಲಿಗೇ ವಾಪಸಾದ. ಆದರೆ ವಾಪಸ್ಸು ಬರುವಾಗ ಯಾವುದೋ ಘಳಿಗೆಯಲ್ಲಿ ಅಲಾರಾಂ ಹೊಡೆದು ಸುರಕ್ಷಾ ತಂಡದವರ ಕೈಗೆ ಸಿಕ್ಕಿಬಿದ್ದ. ಈತ ಪರಾರಿಯಾಗಿದ್ದು ಹೇಗೆ ಎಂದು ತಲೆಕೆಡಿಸಿಕೊಂಡ ಜೈಲಿನ ಷೆರೀಫ್ ಟಾಮಿ ಗ್ರೆಗರಿ ಈತ ವ್ಯಾಯಾಮಶಾಲೆಯ ಗೋಡೆ ಹತ್ತಿ ಅಲ್ಲಿಂದ ಜೈಲಿನ ಬೇಲಿಯನ್ನು ಹಾರಿ ಬಂದಿದ್ದ ಎಂದು ತಿಳಿಸಿದ್ದಾರೆ. ಈಗ ಹಿಂದಿನ ಶಿಕ್ಷೆಯ ಜೊತೆಗೆ ಜೈಲು ಪಾರಾಗಿ ಹೋದ ಮತ್ತು ಕಳ್ಳತನದ ಅಪಾದನೆಯನ್ನೂ ಜಾಕ್ಸನ್ ಎದುರಿಸಬೇಕಾಗಿದೆ. ಇದಕ್ಕೂ ಮೊದಲು ನಿಯಂತ್ರಿತ ವಸ್ತುವೊಂದನ್ನು ಹೊಂದಿದ್ದ ಮತ್ತು ತರಬೇತಿಯ ಅವಧಿಗೂ ಮುನ್ನ ಓಡಿಹೋದ ಆರೋಪದ ಮೇಲೆ ಜೈಲುಶಿಕ್ಷೆ ಅನುಭವಿಸುತ್ತಿದ್ದ. ಈಗ ಹದಿನಾಲ್ಕು ಪ್ಯಾಕೆಟ್ ಸಿಗರೇಟು ಸೇದಲು ಹೆಚ್ಚು ಸಮಯ ಸಿಗುತ್ತದಂತಾಯಿತು. ಕೃಪೆ: ಬಿಬಿಸಿ

ಬರಲಿದೆ – ಅರೆಪಾರದರ್ಶಕ ಕಾಂಕ್ರೀಟ್

March 6, 2009

 

ಕಟ್ಟಡ ನಿರ್ಮಾಣಕ್ಕೆ ಬೇಕಾಗುವ ಪ್ರಮುಖ ಸಾಮಾಗ್ರಿ ಸಿಮೆಂಟ್.  ಸಿಮೆಂಟ್ ಹಾಗೂ ಜಲ್ಲಿಕಲ್ಲಿನ ಮಿಶ್ರಣವೇ ಕಾಂಕ್ರೀಟು.  ಒಂದು ವೇಳೆ ಈ ಕಾಂಕ್ರೀಟು ಪಾರದರ್ಶಕವಾಗಿದ್ದಿದ್ದರೆ?

ಹಂಗರಿ ದೇಶದ ಆರನ್ ಲೊಸೊನ್ಸ್ಕಿ ಎಂಬುವರು ಸಿಮೆಂಟಿಗೆ ಹಾಗೂ ಜಲ್ಲಿಕಲ್ಲಿಗೆ ಪರ್ಯಾಯವಾದ ಆದರೆ ಅವುಗಳಷ್ಟೇ ಸುದೃಢವಾದ ಸಾಮಾಗ್ರಿಗಳಿಂದ ಅರೆಪಾರದರ್ಶಕ ಕಾಂಕ್ರೀಟನ್ನು ಸಿದ್ಧಪಡಿಸಿದ್ದಾರೆ. ಲಿಟ್ರಾಕಾನ್ (LiTraCon – light transmitting concrete) ಎಂಬ ಹೆಸರಿನ ಈ ಸಾಮಾಗ್ರಿ ಹೊರಗಿನ ಬೆಳಕಿನ ಅರ್ಧದಷ್ಟನ್ನು ತನ್ಮೂಲಕ ಹಾಯಲು ಸಾಧ್ಯವಾಗುವಂತೆ ನಿರ್ಮಿತವಾಗಿದೆ. ಈ ಕಾಂಕ್ರಿಟನ್ನು ಅವರು ಸುಮಾರು 2001 ರಲ್ಲಿಯೇ ಸಿದ್ಧಪಡಿಸಿದ್ದರೂ ಇನ್ನೂ ಹತ್ತು ಹಲವು ಪರೀಕ್ಷೆಗಳ ಕಾರಣದಿಂದಾಗಿ ಮಾರುಕಟ್ಟೆಗೆ ತರುವಲ್ಲಿ ವಿಳಂಬವಾಗಿದೆ.  ಜರ್ಮನಿಯ ಲಿಟ್ರಾಕಾನ್ ಸಂಸ್ಥೆ ಈ ವರ್ಷ ಈ ವಸ್ತುವನ್ನು ಮಾರುಕಟ್ಟೆಗೆ ಪರಿಚಯಿಸಲಿದೆ.

transparent-concrete1

ಅಷ್ಟಕ್ಕೂ ಪಾರದರ್ಶಕ ಕಾಂಕ್ರೀಟ್ ಆಗಿದ್ದರೆ ಪ್ರಯೋಜನವೇನು ಎಂದು ಎಲ್ಲರೂ ಕೇಳುವ ಮೊದಲ ಪ್ರಶ್ನೆ.  ಕಟ್ಟಡ ನಿರ್ಮಾಣದಲ್ಲಿ ಬೆಳಕಿಗೆ ಬಹುಮಹತ್ವ ನೀಡಲಾಗುತ್ತದೆ.  ಬೆಳಕು ಎಲ್ಲೆಡೆ ಸಮಾನವಾಗಿ ಲಭ್ಯವಾಗುವಂತೆ ಕಟ್ಟಡವಿನ್ಯಾಸಕಾರರು ಕಟ್ಟಡಗಳಲ್ಲಿ ಹೆಚ್ಚಿನ ಸ್ಥಳಾವಕಾಶ ನೀಡಬೇಕಾಗುತ್ತದೆ.  ಪರಿಣಾಮವಾಗಿ ಕಟ್ಟಡ ಹೆಚ್ಚಿನ ಸ್ಥಳದ ಕಾರಣ ತುಸು ದುಬಾರಿಯಾಗುತ್ತದೆ.  ದೊಡ್ಡ ದೊಡ್ಡ ಕಿಟಕಿಗಳನ್ನು ನೀಡಬೇಕಾಗುತ್ತದೆ.  ಬೆಳಕು ಲಭ್ಯವಿಲ್ಲದೆಡೆ ವಿದ್ಯುತ್ ದೀಪಗಳನ್ನು ಅಳವಡಿಸಿ ಹಗಲಿನಲ್ಲಿಯೂ ವಿದ್ಯುತ್ ಬಳಸಬೇಕಾಗುತ್ತದೆ. 

ಅರೆಪಾರದರ್ಶಕ ಕಾಂಕ್ರೀಟ್ ಬಳಸಿ ನಿರ್ಮಿಸಿದ ಕಟ್ಟಡಗಳಲ್ಲಿ ಸಾಕಷ್ಟು ಮಟ್ಟಿನ ಬೆಳಕು ಗೋಡೆಯಿಂದಲೇ ಲಭ್ಯವಾಗುವುದರಿಂದ ವಿದ್ಯುತ್ ದೀಪ ಉರಿಸುವ ಅಗತ್ಯವಿಲ್ಲ. ಪರಿಣಾಮ ಪೋಲಾಗುತ್ತಿದ್ದ ವಿದ್ಯುತ್ ಗೆ ಶಾಶ್ವತ ಕಡಿವಾಣ.  ದೊಡ್ಡ ದೊಡ್ಡ ಕಿಟಕಿ ರಚಿಸಬೇಕಾಗಿಲ್ಲ. ಬಿಸಿಲನ್ನು ಹೀರದ ಕಾಂಕ್ರೀಟು ಒಳಗಿನ ವಾತಾವರಣವನ್ನು ತಂಪಾಗಿಸಿರುವುದರಿಂದ ಹವಾನಿಯಂತ್ರಣ ಖರ್ಚಿನಲ್ಲೂ ಉಳಿತಾಯ. 

ಕಳೆದ ಸುಮಾರು ಎಂಟು ವರ್ಷಗಳಲ್ಲಿ ಹಲವು ಮಾರ್ಪಾಡುಗಳನ್ನು ಮೂಡಿಸಿಕೊಂಡು ವಿವಿಧ ಬಗೆಗಳಲ್ಲಿ ಲಿಟ್ರಾಕಾನ್ ಈಗ ಅಮೇರಿಕಾದ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.  ಕಳೆದ ಜನವರಿ ನ್ಯೂಯಾರ್ಕಿನಲ್ಲಿ ನಡೆದ  ಯುವ ಸಂಶೋಧಕರಿಗೆ ನೀಡಲಾಗುವ Ernst & Young “Innovator” award, 2008 ಪ್ರಶಸ್ತಿಗೂ ಪಾತ್ರರಾಗಿದ್ದಾರೆ.

ಇವರ ಪಾರದರ್ಶಕ ಉತ್ಪನ್ನಗಳ ಪ್ರದರ್ಶನ ನ್ಯೂಯಾರ್ಕ್ ನಗರದ AIA Center for Architecture on exhibition ಸಭಾಂಗಣದಲ್ಲಿ ಜನವರಿ ೨೨ ರಿಂದ ಪ್ರಾರಂಭವಾಗಿದ್ದು ಏಪ್ರಿಲ್ ೨೫ ರ ವರೆಗೂ ನಡೆಯಲಿದೆ.  ಮೇಕ್ ಇಟ್ ವರ್ಕ್ ಎಂಬ ಈ ಅಭಿಯಾನದಲ್ಲಿ ವಿಶ್ವದ ಹಲವು ಇಂಜಿನಿಯರಿಂಗ್ ಕೌಶಲ್ಯಗಳನ್ನು ಪ್ರದರ್ಶಿಸಲಾತ್ತಿದ್ದು ಪಾರದರ್ಶಕ ಕಾಂಕ್ರೀಟ್ ಗಮನ ಸೆಳೆಯುತ್ತಿದೆ.

300 ಮೈಲಿ ಪ್ರತಿ ಗ್ಯಾಲನ್ ಅಥವಾ 120 ಮೈಲಿ ಪ್ರತಿ ರೀಚಾರ್ಜ್ ಗೆ ಪಯಣಿಸಲಿರುವ ಕಾರು

February 26, 2009

300-mpg-car

ಕ್ಯಾಲಿಫೋರ್ನಿಯಾದ ಕಾರ್ಲ್ಸ್ ಬಾಡ್ ನಗರದಲಿರುವ ಆಪ್ಟೆರಾ ಸಂಸ್ಥೆಯ ಹೊಸ ಮಾರದಿಯ ಈ ಕಾರು ಪ್ರತಿ ಗ್ಯಾಲನ್ ಗೆ 300ಮೈಲಿ ಓಡಿ ಅಚ್ಚರಿ ಮೂಡಿಸಿದೆ.  ಮೂರು ಗಾಲಿಗಳನ್ನು ಹೊಂದಿರುವ ಈ ವಾಹನ ಸುಮಾರು 30 ಸಾವಿರ ಡಾಲರ್ ಬೆಲೆಯುಳ್ಳದ್ದಾಗಿದೆ. 2009 ರಲ್ಲಿ ಬಿಡುಗಡೆಯಾಗಲಿರುವ ಟೈಪ್ ೧-ಹೆಚ್ ಎಂದು ತಾತ್ಕಾಲಿಕ ನಾಮಕರಣವಾಗಿರುವ ಈ ಮಾದರಿಯು ಇಬ್ಬರು ಪ್ರಯಾಣಿಸಲು ಅನುಕೂಲಕರವಾಗಿದೆ. ನಾಲ್ಕು ಗಾಲಿಯ ಐವರು ಪ್ರಯಾಣಿಸಬಹುದಾದ ಕಾರಿಗೆ ಪ್ರಾಜೆಕ್ಟ್ ಎಕ್ಸ್ ಎಂದು ಹೆಸರಿಟ್ಟಿದ್ದು ಸಂಸ್ಥೆ ಇನ್ನೂ ಸಂಶೋಧನೆಗಳನ್ನು ನಡೆಸುತ್ತಿದೆ. 

ಇಂಧನ ಕ್ಷಮತೆಯನ್ನೇ ಮುಖ್ಯ ಗುರಿಯನ್ನಾಗಿಸಿ ಈ ಕಾರನ್ನು ನಿರ್ಮಿಸಲಾಗಿದೆ. ಇದರ ಪ್ರಾತ್ಯಕ್ಷಿಕೆಯನ್ನು ಕೆಳಗಿನ ಕೊಂಡಿ ಉಪಯೋಗಿಸಿ ವೀಡಿಯೋ ಚಿತ್ರ ವೀಕ್ಷಿಸಬಹುದಾಗಿದೆ.

http://www.popularmechanics.com/automotive/new_cars/4237853.html

ಒಂಟಿತನ: ಧೂಮಪಾನದಷ್ಟೇ ಹಾನಿಕರ – ತಜ್ಞರ ಎಚ್ಚರಿಕೆ

February 18, 2009

 

ಅಮೇರಿಕಾದ ಶಿಕಾಗೋ ವಿಶ್ವವಿದ್ಯಾಲಯದ ಸಂಶೋಧಕರ ಪ್ರಕಾರ ಒಂಟಿಜೀವನ ಧೂಮಪಾನ ಮಾಡುವಷ್ಟೇ ಕೆಡಕುಗಳನ್ನು ಉಂಟುವಾಡುತ್ತದೆ.  ತಮ್ಮನ್ನು ಜನಸಂಪರ್ಕದಿಂದ ಬೇರ್ಪಡಿಸಿಕೊಂಡು ಹೆಚ್ಚು ಒಂಟಿಯಾಗಿರಬಯಸುವವರಿಗೆ ಹೆಚ್ಚಿದ ರಕ್ತದೊತ್ತಡ ಮತ್ತಿತರ ಶಾರೀರಿಕ ತೊಂದರೆಗಳು ಕಾಣಿಸಿಕೊಳ್ಳಬಹುದು ಎಂದು ಸಂಶೋಧಕರು ಪ್ರಕಟಿಸಿದ್ದಾರೆ.  ಹೆಚ್ಚು ಉದ್ವೇಗಗೊಳ್ಳುವಾಗ ಬಿಡುಗಡೆಯಾಗುವ ಕಾರ್ಟಿಸೋಲ್ ಎಂಬ ಹೆಸರಿನ ಹಾರ್ಮೋನ್ ಒಂಟಿಜೀವಿಗಳಲ್ಲೇ ಹೆಚ್ಚು ಕಂಡುಬಂದಿದ್ದು  ಹೆಚ್ಚಿನ ಸ್ರಾವ ಧಡೂತಿತನ ಹಾಗೂ ಆಲ್ಜೀಮರ್ ರೋಗಕ್ಕೆ ಕಾರಣವಾಗಬಲ್ಲದು.

18_lonely

ಪ್ರತಿಕೂಲ ಪರಿಣಾಮಗಳಾಗಿ ನಿದ್ದೆ ಬಾರದ ಹೊತ್ತಿನಲ್ಲಿ ನಿದ್ದೆ ಬರುವುದೂ, ನಿದ್ದೆ ಬರಬೇಕಾದ ಸಮಯದಲ್ಲಿ ಬಾರದಿರುವುದು, ಜೀರ್ಣ ವ್ಯವಸ್ಥೆಯಲ್ಲಿ ಏರುಪೇರು ಹಾಗೂ ಇನ್ನಷ್ಟು ಖಿನ್ನತೆ ಕಂಡುಬರಬಹುದು. ಈ ಗುಣಲಕ್ಷಣಗಳು ಓರ್ವ ಧೂಮಪಾನಿಯಲ್ಲಿ ಕಂಡುಬರುವ ಲಕ್ಷಣಗಳೇ ಆಗಿದ್ದು ಒಂಟಿತನ ಪರೋಕ್ಷವಾಗಿ ಧೂಮಪಾನದಷ್ಟೇ ಕೆಡಕು ಉಂಟುಮಾಡಬಹುದಾಗಿದೆ. 

 

ಇತ್ತೀಚೆಗೆ ಅಮೇರಿಕಾದ ವಾರ್ಷಿಕ ಸಮ್ಮೇಳನದಲ್ಲಿ ಸಂಶೋಧಕರಾದ ಜಾನ್ ಕ್ಯಾಸಿಯೊಪ್ಪೋ ಈ ವಿವರಗಳನ್ನು ಪ್ರಕಟಿಸಿದ್ದಾರೆ. ಸ್ನೇಹಿತರ, ಬಂಧುಗಳ, ಕುಟುಂಬದ ನಡುವೆ ಬಾಳುವೆ ನಡೆಸುವವರು ಹೆಚ್ಚು ಆರೋಗ್ಯ ಹೊಂದಿರುತ್ತಾರೆ.  ಆದುದರಿಂದ ಆದಷ್ಟು ಮಟ್ಟಿಗೆ ಬಳಗದಲ್ಲಿರಿ ಎಂದು ಸಂಶೋಧಕರು ಕರೆನೀಡಿದ್ದಾರೆ. 

 

ಕೃಪೆ: ಎನ್.ಬಿ.ಸಿ. ಫಿಲಡೆಲ್ಫಿಯಾ

ಬುಡಾಪೆಸ್ಟ್: 83 ವರ್ಷದ ’ಹಾರುವ ಕಳ್ಳಿ’ ಮತ್ತೊಮ್ಮೆ ಬಂಧನದಲ್ಲಿ

February 16, 2009

 

ಬುಡಾಪೆಸ್ಟ್: ಹಂಗೆರಿ ದೇಶದ ರಾಜಧಾನಿಯಾದ ಬುಡಾಪೆಸ್ಟ್ ನಗರದ ನಿವಾಸಿಯಾಗಿರುವ ಕೋಸ್ಟೋರ್ ಸಾಂಡ್ರೋನ್ ಎಂಬ 83 ವರ್ಷದ ಅಜ್ಜಮ್ಮರಿಗೆ ಕದಿಯುವುದು ಒಂದು ಚಾಳಿ.  ಸುಮಾರು ಆರು ದಶಕಗಳಿಂದ ಹಲವು ಬಾರಿ ಕದ್ದು ಜೈಲು ಅನುಭವಿಸಿರುವ ಇವರು ಕಳೆದ ಗುರುವಾರ ಮತ್ತೊಮ್ಮೆ ಪೋಲೀಸರ ಅತಿಥಿಯಾಗಿದ್ದಾರೆ. ಈ ಬಾರಿ ಬುಡಾಪೆಸ್ಟ್ ನಗರದ ಮನೆಯೊಂದರಲ್ಲಿ ಕಳ್ಳತನ ಮಾಡಲು ನುಗ್ಗುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. 
flying-gizi
ಹಂಗೆರಿಯ ಮಾಧ್ಯಮಗಳು ನೀಡಿರುವ ’ಹಾರುವ ಕಳ್ಳಿ’ (ಫ್ಲೈಯಿಂಗ್ ಗೀಜಿ) ಎಂಬ ಅನ್ವರ್ಥನಾಮ ಇವರಿಗೆ ಅಂಟಿಕೊಂಡಿದ್ದು ಅವರು ಕದ್ದ ಬಳಿಕ ವಿಮಾನಹತ್ತಿ ಪರಾರಿಯಾಗುತ್ತಿದ್ದ ಬಗೆಯ ಮೇಲೆ.  
ಈ ಬಾರಿ ಮಾತ್ರ ಸಿಕ್ಕಬಿದ್ದ ಮೇಲೆ ಬುಡಾಪೆಸ್ಟ್ ನಲ್ಲಿ ವಸತಿ ವಿಪರೀತ ದುಬಾರಿಯಾದುದರಿಂದ ನಗರದ ಹೊರಕ್ಕೆ ಕಡಿಮೆ ಬೆಲೆಯ ವಸತಿಯನ್ನು ಕೊಳ್ಳಲು ಹಣ ಸಂಗ್ರಹಿಸುತ್ತಿದ್ದೆ ಎಂಬ ವಾದ ಮುಂದಿಟ್ಟಿದ್ದಾರೆ.  
ಇದುವರೆಗೆ ಇಪ್ಪತ್ತಕ್ಕೂ ಹೆಚ್ಚು ಬಾರಿ ಜೈಲುವಾಸ ಅನುಭವಿಸಿರುವ ಈ ಅಜ್ಜಮ್ಮ ಈಗ ವಿಮಾನ ಬಿಟ್ಟು ರೈಲು ಹತ್ತಿದ್ದಾರೆ. ಏಕೆಂದರೆ ಹಂಗೆರಿ ಸರ್ಕಾರ ನೀಡಿದ ಸೌಲಭ್ಯದ ಪ್ರಕಾರ ಹಿರಿಯ ನಾಗರಿಕರಿಗೆ ರೈಲು ಪ್ರಯಾಣ ಉಚಿತ.

ಅಬುಭಾಬಿ: ನಂ. 5 + ನಂ. 7 =? 12, ಅಲ್ಲ ನಲವತ್ತಾರು ಕೋಟಿ

February 15, 2009

 

ನಲವತ್ತಾರು ಕೋಟಿ ಎಂಭತ್ತು ಲಕ್ಷ ರೂಪಾಯಿ ಮಾತ್ರ
ಅಬುಧಾಬಿ, ಫೆಬ್ರವರಿ 14:  ಯು.ಎ.ಇ.ಯಲ್ಲಿ ಒಂದಂಕೆಯ ವಾಹನ ನೋಂದಣೆ ಸಂಖ್ಯೆ ಅತಿಪ್ರಮುಖರಿಗೆ ಮೀಸಲು. ಸಂಖ್ಯೆ ನಂ.1 ಆಯಾ ಸಂಸ್ಥಾನದ ಆಡಳಿತಗಾರಿಗೆ ಮೀಸಲು.  ಉಳಿದ ಅಂಕೆಗಳು ಬೇಕೆಂದರೂ ಅತ್ಯಂತ ದುಬಾರಿ.  ಅಂತ್ಯದಲ್ಲಿ 786 ಬರುವ ಸಂಖ್ಯೆಗಳಿಗೂ ಹೆಚ್ಚಿನ ಬೆಲೆ.  ವಿಶೇಷ ಸಂಖ್ಯೆಗಳನ್ನು ದುಬೈ, ಅಬುಧಾಬಿ ಸರ್ಕಾರಗಳು ಹರಾಜು ಹಾಕುತ್ತಲೇ ಇರುತ್ತವೆ.
ಇತ್ತೀಚೆಗೆ ಅಬುಧಾಬಿಯ ಶ್ರೀಮಂತ ವಾಣಿಜ್ಯೋದಮಿಯಾಗಿರುವ ತಲಾಲ್ ಖೋರಿಯವರು ತಮ್ಮ ಎರೆಡು ರೋಲ್ಸ್ ರಾಯ್ಸ್ ಕಾರುಗಳಿಗೆ ಸಂಖ್ಯೆ ೫ ಹಾಗೂ ಸಂಖ್ಯೆ ೭ ನ್ನು ಕ್ರಮವಾಗಿ ೨೫.೨ ಮಿಲಿಯನ್ ಹಾಗೂ ಹನ್ನೊಂದು ಮಿಲಿಯನ್ ದಿರ್ಹಾಮ್(ಒಟ್ಟು ಮೂವತ್ತಾರು ಮಿಲಿಯನ್ ದಿರ್ಹಾಂ – ನಲವತ್ತಾರು ಕೋಟಿ ಎಂಭತ್ತು ಲಕ್ಷ ರೂಪಾಯಿಗಳು) ನೀಡಿ ಖರೀದಿಸಿದ್ದಾರೆ.  ಈ ಬೆಲೆ ಕಾರಿನ ಬೆಲೆಗಿಂತಲೂ ಹೆಚ್ಚಾಗಿದ್ದು ಒಂದು ವಿಶ್ವದಾಖಲೆಯಾಗಿದೆ.
ಈ ಬೆಲೆಯನ್ನು ಹರಾಜಿನಲ್ಲಿ ಕೂಗಿದಾಗ ಬೇರೆ ಯಾರೂ ಬೆಲೆ ಏರಿಸದಿದ್ದುದರಿಂದ 25.2 ಮಿಲಿಯನ್ ದಿರ್ಹಾಂಗಳಿಗೆ ಮಾರಟವಾಗಿತ್ತೇ ಹೊರತು ಒಂದು ವೇಳೆ ಬೇರೆ ಯಾರಾದರೂ ಸ್ಪರ್ಧಿಗಳಿದ್ದಿದ್ದರೆ ಇದರ ಬೆಲೆ ಐವತ್ತು ಮಿಲಿಯನ್ ನೀಡಲೂ ಖೋರಿ ತಯಾರಾಗಿದ್ದರು.
ಈ ಮೊತ್ತವನ್ನು ಯು.ಎ.ಇ.ಯಲ್ಲಿ ಅಪಘಾತದಲ್ಲಿ ಮಡಿದವರ ಬಂಧುಗಳಿಗೆ ಹಾಗೂ ಗಾಯಗೊಂಡವರಿಗೆ ನೆರವು ನೀಡುವಲ್ಲಿ ಮತ್ತು ವಿಕಲಚೇತನರಿಗೆ ಹೆಚ್ಚಿನ ನೆರವು ನೀಡುವಲ್ಲಿ ಬಳಸಲಾಗುವುದು ಎಂದು ಅಬುಧಾಬಿ ಪೋಲೀಸ್ ಇಲಾಖೆಯ ವಾಹನ ನೋಂದಣೆ ವಿಭಾಗದ ನಿರ್ದೇಶಕರಾದ ಮೇಜರ್ ಸುಹೈಲ್ ಅಲ್ ಖಲೀಲಿಯವರು ತಿಳಿಸಿದ್ದಾರೆ.
ಉಳಿದ ಸಂಖ್ಯೆಗಳ ಹರಾಜು ನಡೆದು ಒಟ್ಟು ಎಪ್ಪತ್ತಾರು ಮಿಲಿಯನ್ ದಿರ್ಹಾಂ (ಸುಮಾರು ತೊಂಭತ್ತೆಂಟು ಕೋಟಿ ರೂಪಾಯಿಗಳು) ಸಂಗ್ರಹವಾಗಿದ್ದು ಎಲ್ಲವೂ ಅಪಘಾತ ಪೀಡಿತರಿಗೆ ಹಾಗೂ ವಿಕಲಚೇತನರಿಗೆ ನೆರವಾಗಲಿದೆ. 
ಮೊದಲು ತನಗೆ 5 ಸಂಖ್ಯೆಯ ಮೇಲೆ ಮೋಹವಿದ್ದಿತ್ತಾದರೂ ಹೆಚ್ಚಿನ ಹಣ ಕೊಟ್ಟು ಕೊಳ್ಳಲೇಬೇಕೆಂಬ ಹಟವಿರಲಿಲ್ಲ. ಆದರೆ ಆ ಹಣದ ಬಳಕೆ ಎಲ್ಲಿ ಆಗಲಿದೆಯೆಂದು ಗೊತ್ತಾದ ಬಳಿಕ ಐವತ್ತು ಮಿಲಿಯನ್ ದಿರ್ಹಾಂವರೆಗೂ ನೀಡಲು ತಾನು ತಯಾರಿದ್ದೆ ಎಂದು ಖೋರಿ ತಿಳಿಸಿದ್ದಾರೆ.
ಉತ್ತಮ ಧ್ಯೇಯವಿದ್ದರೆ ಸಹಾಯ ಎಲ್ಲಿಂದ ಬೇಕಾದರೂ ಬರಬಹುದು ಅಲ್ಲವೇ?