Archive for the ‘Uncategorized’ Category

ನವದೆಹಲಿ: ಇನ್ಪೋಸಿಸ್ ನಲ್ಲಿದ್ದೀರಾ? ಸಂಜೆ ಏಳರ ಬಳಿಕ ಮೂತ್ರಕ್ಕೆ ನಿಷೇಧವಿದೆ, ಎಚ್ಚರಿಕೆ!

February 14, 2009

infosys1

ನವದೆಹಲಿ, ಫೆಬ್ರವರಿ 14: ಜಾಗತಿಕ ಮಹಾಕುಸಿತದ ಪರಿಣಾಮ ಈಗಾಗಲೇ ಹಲವು ಪ್ರಮುಖ ಸಂಸ್ಥೆಗಳು ಅನುಭವಿಸುತ್ತಿವೆ. ಹೆಚ್ಚಿನ ಸಂಸ್ಥೆಗಳು ವೆಚ್ಚದಲ್ಲಿ ಕಡಿತ (ಕಾಸ್ಟ್ ಕಟಿಂಗ್) ಗೊಳಿಸಲು ಹಲವು ಮಾರ್ಗಗಳನ್ನು ಅನುಸರಿಸುತ್ತಿವೆ. ಅನವಶ್ಯಕ ವಸ್ತುಗಳನ್ನು ಕೊಳ್ಳದಿರುವುದು, ಜಾಹೀರಾತುಗಳ ಸಂಖ್ಯೆಯಲ್ಲಿ ಕಡಿತ, ಫಲಕಾರಿಯಲ್ಲದ ಪ್ರಾಜೆಕ್ಟುಗಳನ್ನು ನಿಲ್ಲಿಸುವುದು ಅಥವಾ ಮುಂದೂಡುವುದು ಮೊದಲಾದವು.

 

ಸಂಸ್ಥೆಗಳಲ್ಲಿ ಉದ್ಯೋಗಿಗಳಾಗಿರುವವರಿಗೂ ಹಲವು ನಿಬಂಧನೆಗಳು. ಇವೆಲ್ಲಕ್ಕೂ ವಿಭಿನ್ನವಾಗಿ ಭಾರತದ ಪ್ರಮುಖ ಐಟಿ ಸಂಸ್ಥೆ ಇನ್ಪೋಸಿಸ್ ಒಂದು ವಿಶಿಷ್ಟ ರೀತಿಯ ಕಾಸ್ಟ್ ಕಟಿಂಗ್ ಪ್ರಕಟಿಸಿದೆ. ಈಗ ಸಂಸ್ಥೆಯಲ್ಲಿ ಸಂಜೆ ಏಳರ ಬಳಿಕ ಕಾರ್ಯ ನಿರ್ವಹಿಸುವಂತಿಲ್ಲ. ಅಂದರೆ ತಮ್ಮ ಕೆಲಸಗಳನ್ನು ಮುಗಿಸಲು ಅವರಿಗೆ ಅಂತಿಮ ಗಡುವು ಸಂಜೆ ಏಳು ಘಂಟೆ. ಬಳಿಕ ಶೌಚಾಲಯ ಸಹಿತ ಎಲ್ಲಾ ವಿಭಾಗಗಳನ್ನು ಮುಚ್ಚಲಾಗುವುದು. ಶೌಚಾಲಯದ ಬಳಕೆಯನ್ನು ಕಡಿಮೆಗೊಳಿಸಲು ಸಂಜೆ ನಾಲ್ಕುವರೆಯ ನಂತರ ಕುಡಿಯುವ ನೀರು ಲಭ್ಯವಿರುವುದಿಲ್ಲ. ಅಂದರೆ ಮೂತ್ರಕ್ಕೂ ಒಂದು ತರಹದಲ್ಲಿ ಬಂಧನ.  ಕಾಸ್ಟ್ ಕಟಿಂಗ್ ಹೊಸ ರೂಪವನ್ನು ಮೊನ್ನೆ ಗುರುವಾರದಿಂದ ಇನ್ಫೋಸಿಸ್ ಪ್ರಾರಂಭಿಸಿದೆ. ಸಂಸ್ಥೆಯಲ್ಲಿನ ಲಿಫ್ಟ್ ಬಳಸದೇ ಮೆಟ್ಟಿಲುಗಳನ್ನು ಬಳಸುವಂತೆ ಕರಪತ್ರಗಳನ್ನು ಲಿಫ್ಟ್ ಬಳಿ ಅಂಟಿಸಿದೆ. ಇದಕ್ಕೆ ಮಾತ್ರ ಕಾಸ್ಟ್ ಕಟಿಂಗ್ ಹೆಸರಿಡದೇ ಉದ್ಯೋಗಿಗಳ ಉತ್ತಮ ಆರೋಗ್ಯಕ್ಕಾಗಿ ಎಂದು ವಿವರಿಸಿದೆ.ಮುಂದಿನ ಸಾರಿ ಇನ್ಫೋಸಿಸ್ ಕಛೇರಿಗೆ ಹೋಗುವಾಗ ನಾಲ್ಕುವರೆಯ ಮೊದಲೇ ನೀರು ಕುಡಿಯಲು ಮರೆಯದಿರಿ.

ಕೃಪೆ: ಬಿಸಿನೆಸ್ ಸ್ಟಾಂಡರ್ಡ್

Advertisements

ಅರವತ್ತು ವರ್ಷಗಳ ಕಾಲ ಗರ್ಭಿಣಿಯಾಗಿದ್ದ 92 ರ ವೃದ್ಧೆ ಹುವಾಂಗ್ ಯಿಜುನ್ ಹುವಾಂಗ್ಜಿಯೋಟನ್

February 6, 2009

 

1948 ರಲ್ಲಿ ಗರ್ಭದಲ್ಲಿಯೇ ಸತ್ತ ಭ್ರೂಣವೊಂದನ್ನು ಹೊಟ್ಟೆಯಲ್ಲಿಟ್ಟುಕೊಂಡಿದ್ದ 92 ವರ್ಷದ ಚೀನೀ ವೃದ್ಧೆಯೊಬ್ಬರ ಕಥೆ ಬೆಳಕಿಗೆ ಬಂದಿದೆ.

ಬೆಲಾರಸ್ಸಿನ ವಿಶಿಷ್ಟ ಸೌತೆ ಕೊಯ್ಲು

February 2, 2009

 

ಈ ಚಿತ್ರ ನೋಡಿದರೆ ಏನೆನ್ನಿಸುತ್ತದೆ?

belarus1

ಯಾವುದೋ ಒಂದು ಟ್ರಾಲಿಯನ್ನು ಒಂದು ಟ್ರಾಕ್ಟರ್ ಎಳೆದುಕೊಂಡು ಹೋಗುತ್ತಿದೆ ಎನ್ನಿಸುತ್ತಿಲ್ಲವೇ?  ಸೂಕ್ಷ್ಮವಾಗಿ ಗಮನಿಸಿದರೆ ಹಲವು ಗಾಲಿಗಳ ಒಂಡು ಅಡ್ಡಟ್ರಾಲಿಯಲ್ಲಿ ಹಲವಾರು ಹಲಗೆಗಳನ್ನು ಒಂದರ ಪಕ್ಕದಲ್ಲಿ ಒಂದನ್ನು ಜೋಡಿಸಿರುವುದನ್ನು ಗಮನಿಸಬಹುದು.

belarus2

ವಿಭಿನ್ನವಾಗಿ ಕಾಣುವ ಈ ವಾಹನವನ್ನು ವಿಶೇಷವಾಗಿ ಸೌತೆಕಾಯಿ ಕೊಯ್ಲಿಗೆಂದೇ ನಿರ್ಮಿಸಲಾಗಿದೆ.  

belarus3

ಬೆಲಾರಸ್, ರಷ್ಯಾ ಹಾಗೂ ಪೂರ್ವ ಯೋರೋಪ್ ನಡುವಣ ಒಂದು ರಾಷ್ಟ್ರ. ಇಲ್ಲಿನ ಮರಳು ಮಿಶ್ರಿತ ಮಣ್ಣು ಸೌತೆಬೆಳೆಗೆ ಅತ್ಯಂತ ಸೂಕ್ತ. ಅಂತೆಯೇ ಬೆಳೆಯುವ ಬೆಳೆಯ ಪ್ರಮಾಣವೂ ಆಗಾಧ.  ಆದರೆ ಒಮ್ಮೆಲೇ ಕಟಾವಿಗೆ ಬರುವ ಬೆಳೆಯನ್ನು ಸೂಕ್ತಕಾಲದಲ್ಲಿ ಕೀಳದೇ ಇದ್ದರೆ ಸೌತೆಕಾಯಿ ಬಲಿತು ಮಾರುಕಟ್ಟೆಯಲ್ಲಿ ತಿರಸ್ಕೃತಗೊಳ್ಳುವ ಸಾಧ್ಯತೆ.  ಈ ನಿಟ್ಟಿನಲ್ಲಿ ಆವಿಷ್ಕಾರಗೊಂಡದ್ದೇ ಈ ಟ್ರಾಲಿ. 

 

ಸುಮಾರು ನೂರು ವರ್ಷಗಳ ಹಿಂದೆ ಮರದಲ್ಲಿ ಮಾಡಿದ ಟ್ರಾಲಿ ಕಾಲಕ್ರಮೇಣ ಅಗತ್ಯಕ್ಕೆ ತಕ್ಕಂತೆ ಬದಲಾವಣೆಗೊಳ್ಳುತ್ತಾ ಬಂದು ಇಂದು ಈ ರೂಪ ಪಡೆದಿದೆ.

 

ಸುಮಾರು ಹತ್ತರಿಂದ ಹನ್ನೆರೆಡು ಜನರು ತಮ್ಮ ಹೊಟ್ಟೆಯ ಮೇಲೆ ಮಲಗಿ ಸೌತೆಕಾಯಿ ಕಟಾವು ಮಾಡಬಹುದಾದ ಈ ಟ್ರಾಲಿಯನ್ನು ಒಂದು ಟ್ರಾಕ್ಟರ್  ನಿಧಾನಗತಿಯಲ್ಲಿ ಮುಂದೆ ಎಳೆಯುತ್ತದೆ. ಟ್ರಾಲಿಯ ಅಗತ್ಯವಿಲ್ಲದೇ ಕಟಾವು ನಡೆಸಬಹುದಾದರೂ  ಪ್ರತಿಬಾರಿಯೂ ಬಗ್ಗಿ ಕೆಲಸ ಮಾಡಬೇಕಾಗಿರುವುದರಿಂದ ಕೆಲಸವೂ ಹೆಚ್ಚು, ಆಯಾಸವೂ ಹೆಚ್ಚು.  ಅದೇ ಮಲಗಿಕೊಂಡು ಕೆಲಸ ಮಾಡುವುದರಿಂದ ಈ ಎರೆಡೂ ಕಷ್ಟಗಳಿಂದ ಬಿಡುಗಡೆ, ಶೀಘ್ರಕಾಲದಲ್ಲಿ ಹೆಚ್ಚಿನ ಕಟಾವು ಸಾಧ್ಯ.  ಕಿತ್ತ ಬೆಳೆಯನ್ನು ಮುಂದಿರುವ ಚಲಿಸುವ ಬೆಲ್ಟ್ ಮೇಲಿಟ್ಟರೆ ಸಾಕು ಅದು ಬೆಲ್ಟ್ ಮೇಲೆ ಸಾಗಿ ನಡುಭಾಗದಲ್ಲಿರುವ ಪೆಟ್ಟಿಗೆಯಲ್ಲಿ ಸಂಗ್ರಹವಾಗುತ್ತದೆ.  

 

ಈ ರೀತಿಯಲ್ಲಿ ಸುಲಭವಾಗಿ, ಕ್ಷಿಪ್ರಸಮಯದಲ್ಲಿ ಹೆಚ್ಚಿನ ಬೆಳೆಯನ್ನು ಕಟಾವು ಮಾಡಬಹುದಾಗಿದೆ.  ಬೆಲಾರಸ್ ದೇಶದಲ್ಲಿ ಸೌತೆಕಾಯಿ ಮಾತ್ರವಲ್ಲದೇ ಶುಗರ್ ಬೀಟ್ (ಸಕ್ಕರೆ ತಯಾರಿಸಬಹುದಾದ ಬೀಟ್ ರೂಟ್ ಗಡ್ಡೆ), ಆಲುಗೆಡ್ಡೆ ಮೊದಲಾದ ಬೆಳೆಗಳನ್ನೂ ಕಟಾವು ಮಾಡಲಾಗುತ್ತದೆ.  

 

ಬೆಲಾರಸ್ ಬಿಟ್ಟರೆ ಈ ರೀತಿಯ ಕಟಾವು ಮಾಡುವ ಇನ್ನೊಂದು ರಾಷ್ಟ್ರವೆಂದರೆ ಕೆನಡಾ.  ಆದರೆ ಅಲ್ಲಿ ಯಾಂತ್ರೀಕೃತ ಕಟಾವು ವ್ಯವಸ್ಥೆ ಬಂದ ಮೇಲೆ ಸಾಂಪ್ರಾದಾಯಿಕ ವಿಧಾನ ಮೂಲೆಗುಂಪಾಗಿದೆ.

 

ಕೃಪೆ:  www.odditycentral.com

 

 

 

ಬಂದಿದೆ ಬಿದಿರಿನ ಕಾರು – ಬಿದಿರ್ಕಾರು

January 27, 2009

 

ವಾಹನ ಕ್ಷೇತ್ರದಲ್ಲಿ ಏನಾದರೂ ಹೊಸತನ್ನು ನೀಡುತ್ತಿರುವುದು ಜಪಾನ್ ವಿಶೇಷತೆ.  ಇತ್ತೀಚೆಗೆ ಕೇವಲ ಬಿದಿರಿನಿಂದ ಮಾಡಿದ ಹೊರಕವಚವಿರುವ ಎಲೆಕ್ಟ್ರಿಕ್ ಕಾರೊಂದನ್ನು ಜಪಾನಿನ ಕ್ಯೋಟೋ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದೆ.  

 

 

ಕ್ಯೋಟೋ ವಿಶ್ವವಿದ್ಯಾಲಯದ ವೆಂಚರ್ ಬಿಸಿನೆಸ್ ಲ್ಯಾಬೋರೇಟರಿ ಪ್ರಸ್ತುತಪಡಿಸಿದ ಈ ಕಾರಿನ ಹೆಸರು ಬಾಂಬ್ಗೂ (Bambgoo). ಪ್ರತಿ ಬಾರಿ ಚಾರ್ಜ್ ಮಾಡಿದ ಬಳಿಕ ಸತತವಾಗಿ ಐವತ್ತು ಕಿ.ಮೀ ಓಡುವ ಸಾಮರ್ಥ್ಯವುಳ್ಳ ಈ ಬಿದಿರ್ಕಾರು ಕೇಲಲ 2.7 ಮೀ ಉದ್ದ, 1.3 ಮೀಟರ್ ಅಗಲ, 1.65 ಮೀಟರ್ ಎತ್ತರ ಹಾಗೂ ಕೇವಲ ಅರವತ್ತು ಕೇಜಿ ಭಾರವಿದೆ.  ಹೆಸರೇ ತಿಳಿಸುವಂತೆ ಇದರ ಸಂಪೂರ್ಣ ಹೊರಮೈ ತಯಾರಿಸಿದ್ದು ಕೇವಲ ಬಿದಿರಿನಿಂದ.

 

ಒಂದು ವೇಳೆ ಈ ಕಾರನ್ನು ಭಾರತದಲ್ಲಿ ಪ್ರಸ್ತುತಪಡಿಸಿದರೆ ನಮ್ಮ ಗ್ರಾಮೋದ್ಯೋಗಕ್ಕೆ ಒಂದು ಕಳೆ ಬರಬಹುದೇನೋ.  ಏಕೆಂದರೆ ಹೆಣೆದಿರುವ ಬಿದಿರು ಅಷ್ಟೊಂದು ಕಲಾತ್ಮಕವಾಗಿಲ್ಲ.  ನಮ್ಮ ಗ್ರಾಮಗಳಳಲ್ಲಿ ಇನ್ನಷ್ಟು ಚೆನ್ನಾಗಿ ಬುಟ್ಟಿ, ತಟ್ಟಿ ಹೆಣೆಯುವವರಿದ್ದಾರೆ.  ಚಾಸಿ ಜಪಾನಿದ್ದು ಬಾಡಿ ಕರ್ನಾಟಕದ್ದು ಮಾಡಿ ಒಂದು ಜಾಯಿಂಟ್ ವೆಂಚರ್ ತೆರೆದರೆ ಹೇಗೆ?

ಚಾಕ್-ಓ-ಬಾಮಾ – ಹೊಸ ಅಧ್ಯಕ್ಷರ ಮುಖವಿರುವ ಹೊಸ ಚಾಕಲೇಟು

January 26, 2009

 

ನಿಯೋಪಾಲಿಟನ್ ಪ್ರಿಂಟಿಂಗ್ ಅಂಡ್ ಕಂಪನಿ – ಹೆಸರು ಕೇಳಿದರೆ ಏನೆನ್ನಿಸುತ್ತದೆ?  ಯಾವುದೋ ಒಂದು ಮುದ್ರಣ ಅಥವಾ ಪ್ರಕಾಶನ ಸಂಸ್ಥೆ ಇರಬಹುದೆಂದೆನ್ನಿಸುತ್ತದೆ ಅಲ್ಲವೇ. ಸರಿ, ಅಮೇರಿಕಾದ ಕ್ಯಾಲಿಫೋರ್ನಿಯಾದ ನೆವಾರ್ಕ್ ನಗರದಲ್ಲಿರುವ ಈ ಸಂಸ್ಥೆ ವಿಶೇಷ ಚಾಕಲೇಟುಗಳನ್ನು ತಯಾರಿಸಿ ನೀಡುವ ಕೆಲಸವನ್ನೂ ಮಾಡುತ್ತದೆ.  ಕಳೆದ ವಾರ ಅಧ್ಯಕ್ಷರ ಪದವಿಗೇರಿದ ಬರಾಕ್ ಹುಸೇನ್ ಒಬಾಮಾರವರ ಪದವಿಗ್ರಹಣ ಸಂದರ್ಭದಲ್ಲಿ ಸಂಸ್ಥೆ ಅವರ ಮುಖದ ಪಡಿಯಚ್ಚಿರುವ ಚಾಕಲೇಟುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.  ಅದರ ಹೆಸರೇ ಚಾಕ್-ಒ-ಬಾಮಾ. ಪ್ರತಿ ಉತ್ಪನ್ನಕ್ಕೂ ಒಂದು ವಿಶೇಷ ವಾಕ್ಯ ಇರಬೇಕಲ್ಲ, ಹಾಗೇ ಇದಕ್ಕೂ ಇದೆ, “ಎಸ್-ವಿ-ಕ್ಯಾನ್” (ನಾವು ಸಾಧಿಸಬಲ್ಲೆವು) ಎಂಬ ಅಧ್ಯಕ್ಷರ ನುಡಿಯೇ ಚಾಕಲೇಟಿನ ಧ್ಯೇಯವಾಕ್ಯವೂ ಆಗಿದೆ.

choc-o-bama1

ಮೂರುವರೆ ಇಂಚು ಎತ್ತರ, ಎರೆಡೂವರೆ ಇಂಚು ಅಗಲದ ಚಿಕ್ಕ ಪೆಟ್ಟಿಗೆಯಲ್ಲಿಈ ಚಾಕಲೇಟನ್ನು ಪ್ಯಾಕ್ ಮಾಡಲಾಗಿದ್ದು ಹಿಂಭಾಗದಲ್ಲಿ ಅಧ್ಯಕ್ಷರು ಪ್ರಮಾಣವಚನದ ದಿನ ನೀಡಿದ ಭಾಷಣದ ಪ್ರಮುಖ ಅಂಶಗಳನ್ನು ಮುದ್ರಿಸಲಾಗಿದೆ. ಈ ಚಾಕಲೇಟು ತಯಾರಿಗೆ ಬಳಸಲಾದ ವಸ್ತುಗಳ ವಿವರಗಳನ್ನು ಸಂಸ್ಥೆ ಗೋಪ್ಯವಾಗಿರಿಸಿದೆ.  ಆದರೆ ಈ ಉತ್ಪನ್ನ ಅತ್ಯುನ್ನತ ಗುಣಮಟ್ಟದಿಂದ ಕೂಡಿದೆ ಎಂದು ಸಂಸ್ಥೆ ಪ್ರಚಾರ ಪಡಿಸಿದೆ. ಸ್ವಲ್ಪ ಕಹಿ, ಸ್ವಲ್ಪ ಸಿಹಿ ರುಚಿಯಿರುವ ಈ ಚಾಕಲೇಟು ಅಪ್ಪಟ ಕಂದುಬಣ್ಣದ್ದಾದೆ. ವಿಶೇಷ ಮೆರುಗು ತರಲು ಅರಗಿಸಿಕೊಳ್ಳಬಹುದಾದ ಕಂಚಿನ ಪುಡಿಯನ್ನೂ ಉದುರಿಸಲಾಗಿದೆಯಂತೆ.

ಒಂದು ಚಾಕಲೇಟಿನ ಬೆಲೆ ಇಪ್ಪತ್ತು ಡಾಲರ್ (ಸುಮಾರು ಒಂಭೈನೂರು ರೂಪಾಯಿ) ಇದ್ದು ಅಮೇರಿಕಾದಲ್ಲಿ ಎಲ್ಲಿ ಬೇಕಿದ್ದರೂ ಅಂಚೆ ಮೂಲಕ ಕಳುಹಿಸುತ್ತೇವೆ ಎಂದು ಸಂಸ್ಥೆ ತಿಳಿಸಿದೆ. ಅದರಲ್ಲಿ ಒಂದು ಡಾಲರ್ ದತ್ತಕ ನಿಧಿಗೂ ಅರ್ಪಿಸಲಾಗುವುದು.  ಈ ನಿಧಿ ಯಾವ ದತ್ತಕ ಸಂಸ್ಥೆಗೆ ಹೋಗಬೇಕೆಂದು ಬಯಸುವಿರೋ ಆ ಸಂಸ್ಥೆಗೆ ಮತ ನೀಡಿ ಆಯ್ಕೆಯನ್ನೂ ಮಾಡಿಕೊಳ್ಳಬಹುದಾಗಿದೆ.

ಸಂಸ್ಥೆ ೨೦೦೯ ವರ್ಷಕ್ಕೆ ಬಿಡುಗಡೆ ಮಾಡಲಾಗಿರುವ ಚಾಕಲೇಟುಗಳಲ್ಲಿ ಚಾಕ್ ಒ ಬಾಮಾ ಮಾತ್ರವಲ್ಲದೇ ಮುಸ್ಟೇಶ್ ಆನ್ ಅ ಸ್ಟಿಕ್ (ಕೋಲಿನಲ್ಲೊಂದು ಮೀಸೆ), ದ ಆಕ್ಸ್ ಬಾಕ್ಸ್ (ಚೀನಾದ ಹೊಸವರ್ಷದ ಪ್ರತೀಕವಾದ ಎತ್ತಿನ ಚಾಕಲೇಟು) ಮೊದಲಾದವು ಗಮನ ಸೆಳೆಯುತ್ತಿವೆ.

ಗುಂಡಿನ ಮತ್ತೇ ಗಮ್ಮತ್ತು – ಗುಂಡಿನೊಳಕ್ಕೇ ಹಾವಿದ್ದರೆ? ಆಪತ್ತು

January 25, 2009

 

ಮದ್ಯ ಒಂದು ರೀತಿಯ ವಿಷವೆನ್ನುವುದು ಎಲ್ಲರಿಗೂ ಗೊತ್ತು. ನಾಗರ ಹಾವು ಅತ್ಯಂತ ವಿಷಸರ್ಪವೆನ್ನುವುದೂ ಗೊತ್ತು. ಆದರೆ ಆ ಮದ್ಯದೊಳಕ್ಕೆ ನಾಗರಹಾವೊಂದು ಇದ್ದರೆ? ಅಬ್ಬಬ್ಬಾ, ನೆನೆಸಿಕೊಂಡರೇ ಮೈ ಜುಮ್ಮೆಂನ್ನುವ ಈ ಪರಿ ವಿಯೆಟ್ನಾಮಿನ ಜನಪ್ರಿಯ ಮಾದಕದ್ರವ್ಯ.

snake-wine21
(more…)

ಹೆಲಿಕಾಪ್ಟರು ನಡೆಸುವಾಗ ಎಸ್ಸೆಮ್ಮೆಸ್ ಕಳಿಸುವುದೇ? ಕೆರೆಯೇ ಗತಿ

January 19, 2009

 

ವಾಹನ ಚಲಾಯಿಸುವಾಗ ಮೊಬೈಲ್ ಫೋನು ಬಳಸಬೇಡಿ, ಎಸ್ಸೆಮ್ಮೆಸ್ ಕಳಿಸಬೇಡಿ, ನಿಮ್ಮ ಏಕಾಗ್ರತೆ ಭಂಗಗೊಂಡು ಅಪಘಾತಗಳಾಗುವ ಸಾಧ್ಯತೆಗಳಿವೆ, ಚಾಲಕನ ಏಕಾಗ್ರತೆಯನ್ನು ಕೆಡಿಸಬೇಡಿ, ವಾಹನ ಚಲಾಯಿಸುವಾಗ ಮೊಬೈಲು ಬಳಸಲೇಬೇಕಾದ ಸಂದರ್ಭ ಬಂದರೆ ವಾಹನ ನಿಲ್ಲಿಸಿ ಬಿಡಿ ಎಂದೆಲ್ಲಾ ಎಲ್ಲಾ ದೇಶಗಳ ಕಾನೂನುಗಳು ಸಾರಿ ಸಾರಿ ಹೇಳುತ್ತವೆ.  ವಾಹನ ಚಲಾಯಿಸುವಾಗ ಮೊಬೈಲ್ ಫೋನನ್ನು ಹೆಡ್ ಫೋನ್ ಇಲ್ಲದೆ  ಬಳಸುವುದು ಯು.ಎ.ಇ. ಸಹಿತ ಹಲವು ರಾಷ್ಟ್ರಗಳಲ್ಲಿ ದಂಡನಾರ್ಹ ಅಪರಾಧ.  
ಎಸ್ಸೆಮ್ಮೆಸ್ ಅಪಘಾತ ವೀರ ಮೋರ್ಗನ್ ಸಾಕ್ಸ್ಟನ್

ಚಿತ್ರ: ಎಸ್ಸೆಮ್ಮೆಸ್ ಅಪಘಾತ ವೀರ ಮೋರ್ಗನ್ ಸಾಕ್ಸ್ಟನ್

ಇಷ್ಟೆಲ್ಲಾ ಕಟ್ಟಳೆಗಳಿದ್ದರೂ ಚಲಿಸುವ ನೂರು ಕಾರುಗಳಲ್ಲಿ ಇಪ್ಪತ್ತು ಮೂವತ್ತರ ಚಾಲಕರಾದರೂ ತಮ್ಮ ಮೊಬೈಲುಗಳನ್ನು ಒಂದು ಕಿವಿಯ ಮೇಲಿರಿಸಿಕೊಂಡೇ ಇರುತ್ತಾರೆ.  ಇನ್ನೂ ಕೆಲವರು ಎಸ್ಸೆಮ್ಮೆಸ್ ಕಳಿಸುವುದೂ ಉಂಟು.
ವಾಹನ ಚಲಾಯಿಸುವಾಗ ಎಸ್ಸೆಮ್ಮೆಸ್ ಕಳುಹಿಸುವುದು ಅಪಘಾತಕ್ಕೆ ಆಹ್ವಾನ ನೀಡಿದಂತೆ ಎಂಬುದು ಗೊತ್ತಿದ್ದರೂ ಎಸ್ಸೆಮ್ಮೆಸ್ ಕಳುಹಿಸುವ ವೀರಾಗ್ರಣಿಗಳಿಗೇನೂ ಕೊರತೆಯಿಲ್ಲ. ಆದರೆ ಹೆಲಿಕಾಪ್ಟರೊಂದನ್ನು ಚಲಾಯಿಸುತ್ತಿರುವಾಗ ಎಸ್ಸೆಮ್ಮೆಸ್ ಕಳುಹಿಸುವಲ್ಲಿ ಮಗ್ನರಾದರೆ?
ಕಳೆದ ನವೆಂಬರ್ ನಲ್ಲಿ ನ್ಯೂಜಿಲ್ಯಾಂಡಿನ ವನಾಕಾ ಎಂಬ ಸರೋವರದ ಮೇಲೆ ಎರೆಡು ಹೆಲಿಕಾಪ್ಟರುಗಳಲ್ಲಿ ಡೇವಿಡ್ ಸಾಕ್ಸ್ಟನ್ ಎಂಬುವರು ಒಂದು ಹೆಲಿಕಾಪ್ಟರಿನಲ್ಲಿ ಹಾಗೂ ಅವರನ್ನು ಹಿಂಬಾಲಿಸಿಕೊಂಡು ಅವರ ಪುತ್ರ ಮೋರ್ಗನ್ ಸಾಕ್ಸ್ಟನ್ ಅವರು ಇನ್ನೊಂದು ಹೆಲಿಕಾಪ್ಟರಿನಲ್ಲಿ ಸರೋವರದ ಇನ್ನೊಂದು ತೀರದಲ್ಲಿದ್ದ ವನಾಕಾ ವಿಮಾನ ನಿಲ್ದಾಣದತ್ತ ತೆರಳುತ್ತಿದ್ದರು.  ರಸ್ತೆಯಲ್ಲಿ ಚಲಿಸುತ್ತಿರುವ ವಾಹನಗಳ ಹಿಂಭಾಗದಲ್ಲಿ ಬರುತ್ತಿರುವ ವಾಹನಗಳನ್ನು ಗಮನಿಸಲು ರಿಯರ್ ವ್ಯೂ ಕನ್ನಡಿ ಲಭ್ಯವಿದೆ. ಆದರೆ ಆ ಸೌಲಭ್ಯ ಹೆಲಿಕಾಪ್ಟರಿನಲ್ಲಿ ಇದ್ದಿರಲಿಕ್ಕಿಲ್ಲ.  ಹಾಗಾಗಿ ಡೇವಿಡ್ ಅವರಿಗೆ ತಮ್ಮ ಹಿಂದೆ ಮಗರಾಯ ಹಿಂಬಾಲಿಸುತ್ತಿಲ್ಲವೆನ್ನುವುದು ವಿಮಾನ ನಿಲ್ದಾಣ ತಲುಪುವವರೆಗೂ ತಿಳಿಯಲೇ ಇಲ್ಲ.  ಒಂದು ಹೆಲಿಕಾಪ್ಟರಿನಿಂದ ಇನ್ನೊಂದಕ್ಕೆ ರೇಡಿಯೋ ಮೂಲಕ ಮಾತನಾಡುವ ಸೌಲಭ್ಯವಿದ್ದರೂ ಅದೇಕೆ ಮೌನವಾಗಿದ್ದರೋ, ದೇವರೇ ಬಲ್ಲ. ಮನೆಯ ಜಗಳ ಆಕಾಶಕ್ಕೆ ತಲುಪಿರಲಿಕ್ಕೂ ಸಾಕು.
ಏನಾದರಾಗಲಿ, ತಮ್ಮ ಮಗ ತಲುಪಲಿಲ್ಲವೆಂದು ಡೇವಿಡ್ ಅವರು ಹುಯಿಲಿಟ್ಟೊಡನೆಯೇ ಮೋರ್ಗನ್ ಅವರ ಹೆಲಿಕಾಪ್ಟರ್ ಹುಡುಕಾಟ ಶುರುವಾಯಿತು.  ಶೀಘ್ರದಲ್ಲಿಯೇ ಅವರ ಹೆಲಿಕಾಪ್ಟರ್ ಸರೋವರದ ನಡುವಿನಲ್ಲಿ ಅಪಘಾತಕ್ಕೀಡಾಗಿದ್ದುದು ಕಂಡುಬಂದಿತ್ತು.  ರಕ್ಷಣಾ ಸಿಬ್ಬಂದಿ ಕೂಡಲೇ ನೀರಿಗೆ ಜಿಗಿದು ಮೋರ್ಗನ್ ಅವರನ್ನು ಸುರಕ್ಷಿತವಾಗಿ ಕರೆದುತಂದರು.
ಆ ಸಮಯದಲ್ಲಿ ಆಗಿದ್ದಿಷ್ಟೇ.  ಹೆಲಿಕಾಪ್ಟರ್ ನಡುಆಗಸದಲ್ಲಿ ಚಲಿಸುತ್ತಿದ್ದಾಗ ಬೇಜಾರಾಗಿ ಒಂದು ಎಸ್ಸೆಮ್ಮೆಸ್ ಕಳುಹಿಸೋಣವೆಂದು ತಮ್ಮ ಮೊಬೈಲ್ ತೆಗೆದುಕೊಂಡು ಒಂದಾದ ಮೇಲೊಂದರಂತೆ ತಮ್ಮ ಸ್ನೇಹಿತರಿಗೆ ಎಸ್ಸೆಮ್ಮೆಸ್ ಕಳುಹಿಸುತ್ತಾ ಹೋದರು.  ಎಸ್ಸೆಮ್ಮೆಸ್ ಲೋಕದಲ್ಲಿ ಮುಳುಗಿದ್ದ ಅವರಿಗೆ ತಮ್ಮ ನಿಯಂತ್ರಣದಿಂದ ಯಾವಾಗ ಹೆಲಿಕಾಪ್ಟರು ನೀರಿನೆಡೆ ಚಲಿಸಿತ್ತೋ ಗೊತ್ತೇ ಅಗಲಿಲ್ಲ.  ಇನ್ನೇನಾಗಬೇಕು, ರಭಸದಲ್ಲಿ ನೀರಿಗೆ ಅಪ್ಪಳಿಸಿದ ಹೆಲಿಕಾಪ್ಟರು ಚಕನಾ ಚೂರು.  
ಈ ಘಟನೆಯ ಬಳಿಕ ಎಲ್ಲಾ ಪೈಲಟುಗಳಿಗೆ ಮೊಬೈಲು ಫೋನ್ ಬಳಸದಂತೆ ಕಟ್ಟೆಚ್ಚರ ನೀಡಲಾಗಿದೆಯಂತೆ.  ಹಾರಾಟದಲ್ಲಿರುವಾಗ ತಾವೂ ಎಸ್ಸೆಮ್ಮೆಸ್ ಕಳುಸುತ್ತಿದ್ದೇವೆಂದೂ ಆದರೆ ಅದರಿಂದ ಹಾರಾಟವೇ ಭಗ್ನಗೊಳ್ಳುವಷ್ಟು ಮಗ್ನರಾಗುತ್ತಿದ್ದಿಲ್ಲವೆಂದೂ, ಇನ್ನು ಮುಂದಕ್ಕೆ ಹುಷಾರಾಗಿರುತ್ತೇವೆಂದು ಉಳಿದ ಪೈಲಟುಗಳು ಭಾಷೆ ನೀಡಿದ್ದಾರೆ. 
ಅಂದ ಹಾಗೆ ಅವರು ಕಳುಹಿಸಿದ ಸಂದೇಶ ಏನು ಎಂಬುವುದು ಇನ್ನೂ ರಹಸ್ಯವಾಗಿಯೇ ಉಳಿದಿದೆ.

ನೀರಡಿಯಲ್ಲಿ ಇಸ್ತ್ರಿ ಮಾಡುವುದೇ? ಎಲಾ ಇದೆಂಥ ಗಿನ್ನೆಸ್ ದಾಖಲೆ?

January 18, 2009

ಇಸ್ತ್ರಿ ಮಾಡುವುದು ಎಂದರೆ ಬಿಸಿ ಇಸ್ತ್ರಿಪೆಟ್ಟಿಯನ್ನು ಮೇಜಿನ ಅಥವಾ ನೆಲದ ಮೇಲೆ ಹಾಸಿದ ಚದ್ದರವೊಂದರ ಮೇಲೆ ಬಟ್ಟೆಯ ಮೇಲೆ ಹಾಯಿಸಿ ನಯವಾಗಿಸುವುದು ಎಂದು ನಾವೆಲ್ಲರೂ ತಿಳಿದುಕೊಂಡಿರುವ ಸತ್ಯ. ಆದರೆ ಅದೇ ಕಾರ್ಯವನ್ನು ನೀರಿನಾಳದಲ್ಲಿ ನಡೆಸಿದರೆ?

ಹುಚ್ಚುತನವೆಂದು ಅನ್ನಿಸುವ ಈ ಕಾರ್ಯಕ್ಕೂ ಒಂದು ಗಿನ್ನೆಸ್ ದಾಖಲೆಯಿದೆ. ಕಳೆದ ವರ್ಷ ಹತ್ತು ನಿಮಿಷದ ಅವಧಿಯಲ್ಲಿ ಆಸ್ಟ್ರೇಲಿಯಾದ ಎಪ್ಪತ್ತೆರೆಡು ಮುಳುಗುಗಾರರ ತಂಡ ಲಿನೆನ್ ಬಟ್ಟೆಯೊಂದನ್ನು ಇಸ್ತ್ರಿ ಮಾಡಿತ್ತು.

ಆದರೆ ಈ ವರ್ಷ ಬ್ರಿಟನ್ನಿನ ಎಂಭತ್ತಾರು ಮುಳುಗುಗಾರರ ತಂಡ ಆ ದಾಖಲೆಯನ್ನು ಮುರಿದು ದಾಖಲೆಯನ್ನು ತನ್ನ ಮುಡಿಗೇರಿಸಿಕೊಂಡಿದೆ.

ತ್ಯಜಿಸಲಾಗಿರುವ ಗಣಿಯೊಂದರಲ್ಲಿ 173 ಅಡಿ ಆಳದದಲ್ಲಿ ಹತ್ತು ನಿಮಿಷದಲ್ಲಿ ಎಂಭತ್ತಾರು ಮುಳುಗುಗಾರರು ಒಂದು ಬಟ್ಟೆಯನ್ನು ಇಸ್ತ್ರಿ ಮಾಡಿದ್ದಾರೆ.

ಬ್ರಿಟನ್ನಿನ ಸೌಥ್ ವೇಲ್ಸ್ ಎಂಬಲ್ಲಿ ನಡೆದ ಈ ಸಾಧನೆ ನಿಜಕ್ಕೂ ಲೈಫ್ ಬೋಟ್ ರಕ್ಷಣಾಗಾರರಿಗೆ ನೆರವು ನೀಡುವಲ್ಲಿ ಧನಸಂಗ್ರಹದ ಗುರಿಯಾಗಿಟ್ಟುಕೊಂಡು ನಡೆಸಲಾಗಿತ್ತೇ ವಿನಃ ದಾಖಲೆಗಾಗಿ ಅಲ್ಲ ಎಂದು ತಂಡದ ನಾಯಕ ಹಾಗೂ ಕಾರ್ಯಕ್ರಮವನ್ನು ಆಯೋಜಿಸಿದ್ದ ಗಾರೆಥ್ ಲಾಕ್ ಅವರು ತಿಳಿಸಿದ್ದಾರೆ.

ಈ ಪ್ರಯತ್ನವನ್ನು ವೀಕ್ಷಿಸಲು ನಿರೀಕ್ಷೆಗಿಂತಲೂ ಹೆಚ್ಚಿನ ಜನರು ಆಗಮಿಸಿದ್ದುದು ವಿಶೇಷವಾಗಿದೆ. ಹೊಸ ದಾಖಲೆಯನ್ನು ಗಿನ್ನೆಸ್ ಸಂಸ್ಥೆ ಇನ್ನು ಒಂದೆರೆಡು ವಾರದಲ್ಲಿ ಪ್ರಕಟಿಸಬಹುದು.

ಇಸ್ತ್ರಿ ಮಾಡಿದ ಬಟ್ಟೆ ಒದ್ದೆಯಾಗಿಯೇ ಇದ್ದರೆ ತೊಡುವುದು ಹೇಗೆ? ಈ ಮಾಹಿತಿಯನ್ನು ಅವರು ನೀಡಿಲ್ಲ.

ಕೃಪೆ: www.thesun.co.uk

ಭೂತ ನೋಡಬೇಕೇ? ಸ್ವಲ್ಪ ಜಾಸ್ತಿ ಕಾಫಿ ಕುಡಿಯಿರಿ ಸಾಕು

January 15, 2009

 

ಕಾಫಿ ಕುಡಿಯುವುದು ಮಾದಕ ಪದಾರ್ಥ ಸೇವನೆಯಂತಲ್ಲ. ಆದರೆ ಕುಡಿಯುವ ಪ್ರಮಾಣ ಹೆಚ್ಚಾದರೆ ಮಾತ್ರ ಪರಿಣಾಮ ವಿರುದ್ಧವಾಗಬಹುದು. ಪ್ರತಿದಿನ ಏಳು ಕಪ್ ಗಳಿಗೆ ಹೆಚ್ಚಿನ ಕಾಫಿ ಸೇವನೆಯಿಂದ ಒಂದು ರೀತಿಯ ಮಿಥ್ಯಾದರ್ಶನ (hallucination) ಪರಿಣಾಮ ಬೀರಬಹುದೆಂದೂ, ಇದರಿಂದಾಗಿ ಇಲ್ಲದ ವಸ್ತುಗಳನ್ನು ಕಾಣುವ ಅಥವಾ ಇಲ್ಲದ ಧ್ವನಿಗಳನ್ನು ಕೇಳುವ ಭ್ರಮೆಯುಂಟಾಗಬಹುದು. ಈ ಭ್ರಮೆಯನ್ನು ಹೆಚ್ಚಿನವರು ಭೂತಕ್ಕೆ ಕಲ್ಪಿಸಿಕೊಂಡು ಭಯಭೀತರಾಗುತ್ತಾರೆಂದು ಒಂದು ಸಂಶೋಧನೆ ತಿಳಿಸಿದೆ.

 

coffeeನಮ್ಮ ಶರೀರ ತಾಳಿಕೊಳ್ಳಬಹುದಾದ ಮಿತಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕೆಫೀನ್ ರಕ್ತದಲ್ಲಿ ಸೇರಿದಾಗ ಈ ಪರಿಣಾಮಗಳಾಗುತ್ತವೆ ಎಂದು ಸಂಶೋಧನೆ ತಿಳಿಸಿದೆ. ಹಾಗಾದರೆ ಯಾರಾದರೂ ಭೂತ ನೋಡಿದ್ದಾರೆಂದು ತಿಳಿಸಿದರೆ ಮೊದಲು ಎಷ್ಟು ಕಪ್ ಕಾಫಿ ಕುಡಿದಿದ್ದೀಯಾ ಎಂದು ಮೊದಲು ವಿಚಾರಿಸುವುದು ಒಳಿತು.

ಕೃಪೆ: http://www.thesun.co.uk

Hello world!

January 4, 2009

Welcome to WordPress.com. This is your first post. Edit or delete it and start blogging!