Archive for the ‘vismaya’ Category

ವಿಶ್ವದ ಏಕಮಾತ್ರ ಅಮರಜೀವಿ

March 26, 2010

ವಿಶ್ವದ ಸಕಲ ಜೀವಜಂತುಗಳಿಗೆ ಹುಟ್ಟಿದಮೇಲೆ ಸಾವು ಎಂಬುದು ಒಂದಿದೆ. ಹುಟ್ಟಿನಿಂದ ಸಹಜವಾಗಿ ಸಾಯುವ ವೇಳೆಯನ್ನು ಆಯಸ್ಸು ಎನ್ನುತ್ತೇವೆ. ಒಂದು ವೇಳೆ ಸ್ವಾಭಾವಿಕವಾದ ಸಾವೇ ಇಲ್ಲದಿದ್ದರೆ? ಆಗ ಆ ಜೀವಿ ಅಮರವಾಗುತ್ತದೆ. ಈ ಅಮರತ್ವವನ್ನು ಪಡೆದುಕೊಳ್ಳುವ ಸಲುವಾಗಿ ನಡೆಸಿದ ಪ್ರಯತ್ನಗಳು ನಮ್ಮ ಪುರಾಣಗಳಲ್ಲಿವೆ, ಹಲವು ಥ್ರಿಲ್ಲರ್ ಕಥೆಗಳಿಗೆ ಜೀವಾಳವಾಗಿವೆ.

(more…)

Advertisements

ಜಗತ್ತಿನ ಅತ್ಯಂತ ಚಿಕ್ಕ ಕಾರು – ದ ಪೀಲ್ 50

February 7, 2009

 

1962 ರಲ್ಲಿ ಪ್ರಸ್ತುತಪಡಿಸಿದ್ದ ಇಂಗ್ಲೆಂಡಿನ ಕಾರೊಂದು ಇಂದಿಗೂ ಜಗತ್ತಿನ ಅತ್ಯಂತ ಕಿರಿಯ ಕಾರೆಂದು ಗಿನ್ನೆಸ್ ದಾಖಲೆಯಲ್ಲಿ ರಾರಾಜಿಸುತ್ತಿದೆ.  

ಇಂದು ಜಗತ್ತಿನ ಹತ್ತು ಹಲವು ಕಾರುನಿರ್ಮಾಣ ಸಂಸ್ಥೆಗಳು ಒಂದಕ್ಕಿಂತ ಒಂದು ಉನ್ನತ ಮಾದರಿಯ ಕಾರುಗಳನ್ನು ತಯಾರಿಸುತ್ತಾ ನಡೆದರೂ ಈ ಕಾರಿಗಿಂತ ಚಿಕ್ಕ ಕಾರನ್ನು ನಿರ್ಮಿಸುವತ್ತ ಏಕೆ ಒಲವು ತೋರಲಿಲ್ಲವೋ ಏನೋ. ಇದೇ ಕಾರಣದಿಂದ ಇಂದಿಗೂ ಈ ಪೀಲ್ – ೫೦ ಕಾರು ಜಗತ್ತಿನ ಅತ್ಯಂತ ಚಿಕ್ಕ ಕಾರೆಂಬ ಹಣೆಪಟ್ಟಿ ಹೊತ್ತಿದೆ.

1950 ರ ದಶಕದಲ್ಲಿ ಇಂಗ್ಲೆಂಡಿನ ಪೀಲ್ ಇಂಜಿನಿಯರಿಂಗ್ ಸಂಸ್ಥೆ ಸ್ಥಾಪನೆಯಾಗಿತ್ತು.  ಈ ಕಾರಣದಿಂದಲೇ ಈ ಕಾರಿಗೆ ೫೦ರ ವಿಶೇಷಣ ನೀಡಲಾಯಿತು.  ಆ ಕಾಲಕ್ಕೆ ಸಂಸ್ಥೆ ಹೊಂದಿದ್ದ ಉದ್ಯೋಗಿಗಳ ಸಂಖ್ಯೆ ಕೇವಲ ನಲವತ್ತು.  

 

ಸಂಸ್ಥೆಯ ಅಭಿಯಂತರರಾದ ಸಿರಿಲ್ ಕ್ಯಾನೆಲ್ ಮತ್ತು ಹೆನ್ರಿ ಕಿಸ್ಸಾಕ್ ಎಂಬಿಬ್ಬರು ವಿನ್ಯಾಸಗೊಳಿಸಿದ ಈ ಕಾರನ್ನು 1962 ರ ಅರ್ಲ್ಸ್ ಕೋರ್ಟ್ ಮೋಟಾರ್ ಶೋ ಪ್ರದರ್ಶನದಲ್ಲಿ ಪ್ರಥಮ ಬಾರಿಗೆ ಜಗತ್ತಿಗೆ ಪರಿಚಯಿಸಲಾಯಿತು. ಆ ಬಳಿಕ ಅದಕ್ಕೆ ಅರ್ಹ ಗಿನ್ನೆಸ್ ದಾಖಲೆಯೂ ಸಿಕ್ಕಿತು.  

 

ಮೂರು ಚಕ್ರಗಳ ಈ ವಾಹನವನ್ನು ಕಾರೆಂದು ಕರೆಯುವುದಕ್ಕಿಂತ ಕಾರಿನಾಕಾರ ಪಡೆದಿರುವ ಮೋಟಾರ್ ಸೈಕಲ್ ಎಂದರೇ ಹೆಚ್ಚು ಸೂಕ್ತ.  ಮೋಟಾರ್ ಸೈಕಲ್ ಮೈಲೇಜ್ ಹಾಗೂ ಕಾರಿನ ಅನುಕೂಲತೆಗಳನ್ನು ಹೊಂದಿರುವ ವಾಹನವಾಗಿ ಮಾರ್ಪಟ್ಟ ಪೀಲ್-೫೦ ನೀಡುವ ಮೈಲೇಜ್ ನೂರು ಮೈಲಿ ಪ್ರತಿ ಗ್ಯಾಲನ್ (ಅಂದರೆ ಸುಮಾರು ಮೂವತ್ತೈದುವರೆ ಕಿ.ಮೀ. ಪ್ರತಿ ಲೀಟರ್ ಪೆಟ್ರೋಲಿಗೆ). ಒಬ್ಬರು ಮಾತ್ರ ಪ್ರಯಾಣಿಸಬಹುದಾದ ಕಾರಿನ ಅಂದಿನ ಬೆಲೆ ಕೇವಲ ಇನ್ನೂರು ಪೌಂಡ್. ಐವತ್ತು ಸೀಸಿ ಇಂಜಿನ್ ಉಳ್ಳ ಕಾರಿನ ಗರಿಷ್ಟ ವೇಗ 61 ಕಿ.ಮೀ. ಪ್ರತಿ ಘಂಟೆಗೆ.  ಆ ಕಾಲಕ್ಕೆ ಸುಮಾರು ಐವತ್ತು ಕಾರುಗಳನ್ನು ಮಾತ್ರ ಉತ್ಪಾದಿಸಲಾಗಿದ್ದು ಅವುಗಳಲ್ಲಿ ಇಪ್ಪತ್ತು ಇಂದಿಗೂ ಸುಸ್ಥಿತಿಯಲ್ಲಿವೆ. ಇಂದು ಇವುಗಳ ಬೆಲೆ ಐವತ್ತು ಸಾವಿರ ಪೌಂಡ್(ಸುಮಾರು ಮೂವತ್ತು ಲಕ್ಷ ರೂಪಾಯಿಗಳು).

 

ಇಂಗ್ಲೆಂಡಿನ ನಾರ್ಟಿಂಗ್ ಹಾಮ್ ನ ಆಂಡಿ ಕಾರ್ಟರ್ ಸಂಸ್ಥೆ ಈ ಕಾರುಗಳ ಮರುನಿರ್ಮಾಣ ಮಾಡಿ ಮಾರಾಟ ಮಾಡುತ್ತಿದ್ದು ಹತ್ತು ಸಾವಿರ ಪೌಂಡ್ ಬೆಲೆ ಹೊಂದಿದೆ. ಕೇವಲ ಮೂರು ಗೇರುಗಳ ಈ ಕಾರಿಗೆ ಹಿಂದೆ ಹೋಗಲು ರಿವರ್ಸ್ ಗೇರೇ ಇಲ್ಲ.  ಹಗುರವಾದ ಈ ಕಾರನ್ನು ಸ್ಕೂಟರಿನಂತೆಯೇ ತಳ್ಳಿಕೊಂಡೇ ರಿವರ್ಸ್ ತೆಗೆಯುವುದು ಸುಲಭವಾಗಿದೆ.  

ಕಾರಿನ ಸೊಬಗಿಗಿಂತಲೂ ಅತಿ ಚಿಕ್ಕ ಕಾರೆಂಬ ಖ್ಯಾತಿಯೇ ಈ ಕಾರಿನ ಗರಿಮೆಯಾಗಿದೆ.  ಬ್ರಿಟನ್ನಿನ ಅಂಚೆ ಇಲಾಖೆ ಹಲವು ಅಂಚೆಚೀಟಿಗಳಲ್ಲಿ ಈ ಕಾರಿನ ವಿವಿಧ ಮಾದರಿಯ ಚಿತ್ರಗಳನ್ನು ಮುದ್ರಿಸಿ ಹೆಚ್ಚಿನ ಖ್ಯಾತಿ ತಂದುಕೊಟ್ಟಿದೆ.

ಮನಃಶಕ್ತಿಯಿಂದ ವಸ್ತುಗಳನ್ನೆತ್ತಬಲ್ಲ ಮಿರೋಸ್ಲಾವ್ ಮಗೋಲಾ

January 30, 2009

 

ಮನಃಶಕ್ತಿ, ಅಥವಾ ಮನಸ್ಸಿನ ಶಕ್ತಿಯಿಂದ ವಸ್ತುಗಳನ್ನು ಚಲಿಸಲು ಸಾಧ್ಯವೇ?  ಪುರಾಣಗಳಲ್ಲಿ ಮಾತ್ರ ಕೇಳಿದ್ದ ಈ ವಿದ್ಯಮಾನ ಈಗ ಪೋಲ್ಯಾಂಡಿನ ಮಿರೋಸ್ಲಾವ್ ಮಗೋಲಾ ಎಂಬುವವರಿಗೆ ಸಿದ್ದಿಸಿದೆ.  

ಪೋಲ್ಯಾಂಡಿನ ಐವತ್ತು ವರ್ಷ ವಯಸ್ಸಿನ ಮಿರೋಸ್ಲಾವ್ ಅವರು ಕೇವಲ ಮನಸ್ಸಿನ ಶಕ್ತಿಯಿಂದಲೇ ವಸ್ತುಗಳನ್ನು ಮೇಲೆತ್ತಬಲ್ಲರು. ಅವರು ಮುಟ್ಟಿದ ವಸ್ತು ಆಯಸ್ಕಾಂತಕ್ಕೆ ಅಂಟಿಕೊಂಡು ಬರುವಂತಹ ಕಬ್ಬಿಣದ ತುಂಡಿನಂತೆಯೇ ಸರಾಗವಾಗಿ ಮೇಲೆದ್ದು ಬರಬಲ್ಲದು.  ಈ ಕಾರಣದಿಂದಾಗಿಯೇ ಅವರಿಗೆ ಮ್ಯಾಗ್ನೆಟಿಕ್ ಮ್ಯಾನ್ ಅಥವಾ ಆಯಸ್ಕಾಂತ ಮನುಷ್ಯ ಎಂಬ ಅನ್ವರ್ಥನಾಮವೂ ಬಂದಿದೆ.

ಪ್ರತಿ ಮನುಷ್ಯನಲ್ಲಿಯೂ ಒಂದು ವಿಧವಾದ ಆಯಸ್ಕಾಂತೀಯ ಶಕ್ತಿಯಿದೆ ಆದರೆ ಅದು ಒಂದೆಡೆ ಕೇಂದ್ರ್‍ಈಕೃತವಾಗದೆ ಹರಡಿ ಹೋಗಿರುವುದರಿಂದ ನಾವು ಅದರ ಸಾಮರ್ಥ್ಯಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.  ಆದರೆ ಕೊಂಚ ಪ್ರಯತ್ನದ ಬಳಿಕ ಈ ಶಕ್ತಿಯನ್ನು ಕೇಂದ್ರ್‍ಈಕರಿಸಲು ಸಾಧ್ಯವಾದರೆ ಪವಾಡಗಳನ್ನೇ ಸೃಷ್ಟಿಸಬಹುದು ಎಂದು ಮಿರೋಸ್ಲಾವ್ ಹೇಳುತ್ತಾರೆ.

ಇವರ ಶಕ್ತಿಯನ್ನು ಪರೀಕ್ಷೆಗೆ ಒಳಪಡಿಸಿದ ಹಲವಾರು ವೈದ್ಯರು, ಮನಃಶಾಸ್ತ್ರಜ್ಞರು ಹಾಗೂ ವಿಜ್ಞಾನಿಗಳು ಇದರಲ್ಲಿ ಯಾವುದೇ ಬೂಟಾಟಿಕೆ ಇಲ್ಲ ಎಂದು ಒಪ್ಪಿಕೊಂಡಿದ್ದಾರೆ.  ಇವರು ಬಳಸುವ ಶಕ್ತಿಗೆ ಸೈಕೋ ಕೈನೆಸಿಸ್ psycho kinesis ಎಂಬ ಕರೆಯಲಾಗುತ್ತದೆ.  

ತಮ್ಮ ಶಕ್ತಿಯಿಂದ ಅವರು ಕಬ್ಬಿಣ, ಮಾರ್ಬಲ್, ಸೆರಾಮಿಕ್, ಮೊದಲಾದವುಗಳಿಂದ ತಯಾರಿಸಿದ ವಸ್ತುಗಳನ್ನು ಆಯಸ್ಕಾಂತದಂತೆ ಮೇಲೆತ್ತಬಲ್ಲರು.  ತಮ್ಮ ತಲೆಯ ಮೇಲೆ ಅಂಟಿಕೊಂಡಂತೆ ಇರಿಸಬಲ್ಲರು. 

ಈಗ ಈ ವಸ್ತುಗಳನ್ನು ಗಾಳಿಯಲ್ಲಿ ತೇಲುವಂತೆ ಮಾಡುವತ್ತ ಅವರ ಗಮನ ಹರಿದಿದೆ.  ಈ ವಿದ್ಯೆಯನ್ನು ಸಾಧಿಸಲು ಅವರು ಆಫ್ರಿಕಾ, ಚೀನಾ, ಮಧ್ಯಪ್ರಾಚ್ಯ ದೇಶಗಳು ಹಾಗೂ ಭಾರತಕ್ಕೂ ಬಂದಿದ್ದರು.  ತಮ್ಮ ಸಾಧನೆಗೆ ಅತಿಹೆಚ್ಚಿನ ಮಾಹಿತಿ ತನಗೆ ಭಾರತ ಹಾಗೂ ಚೀನಾದಲ್ಲಿ ದೊರಕಿತು ಎಂದು ಅವರು ಹೇಳುತ್ತಾರೆ.   

ಸುಮ್ಮನೆ ವಸ್ತುವನ್ನು ಮುಟ್ಟಿ ಆಯಸ್ಕಾಂತದಂತೆ ಮೇಲೆತ್ತಿದರೆ ಏನು ಮಹಾ? ಅದರಿಂದ ಏನು ಉಪಯೋಗ ಎಂದು ಹಲವರ ಅನುಮಾನ.  ಆದರೆ ಮನಃಶಾಸ್ತ್ರಜ್ಞರ ಪ್ರಕಾರ ಇವರೊಂದು ಅಪರೂಪದ ಮಾಂತ್ರಿಕ.  ಮನುಷ್ಯನ ಮಾನಸಿಕ ಲೋಕ ಇನ್ನೂ ಅರ್ಥವಾಗದ ಆಗರ.  ಒಂದು ವೇಳೆ ಈ ವಿದ್ಯೆಯಿಂದ ಮನುಷ್ಯನ ಮಾನಸಿಕ ಲೋಕವನ್ನು ಪ್ರವೇಶಿಸಲು ಸಾಧ್ಯವಾದರೆ ಅಥವಾ ಈ ವಿದ್ಯೆಯಿಂದ ಮನಃಶಾಸ್ತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಅರಿಯಲು ಸಾಧ್ಯವಾದರೆ ಮನುಕುಲಕ್ಕೆ ಲಭಿಸಬಹುದಾದ ಉಪಯೋಗ ಅಸದಳ. 

ಆದ್ದರಿಂದ ಪೋಲ್ಯಂಡಿನ ಹಲವು ಮನಃಶಾಸ್ತ್ರಜ್ಞರು ಇವರ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.  ಮನುಕುಲಕ್ಕೆ ಉಪಯೋಗವಾಗುವುದಾದರೆ ತಾನು ಯಾವುದೇ ತ್ಯಾಗಕ್ಕೆ ಸಿದ್ಧ ಎಂದು ಮಿರೋಸ್ಲಾವ್ ಮುಂದೆ ಬಂದಿದ್ದಾರೆ. ಈ ನಿಟ್ಟಿನಲ್ಲಿ Power of the Brain (ಮೆದುಳಿನ ಸಾಮರ್ಥ್ಯ) ಎಂಬ ಪುಸ್ತಕವನ್ನೂ ಬರೆದಿದ್ದಾರೆ. ಈಗ ಎರಡನೆಯ ಪುಸ್ತಕ ಬರೆಯುವ ಹುನ್ನಾರದಲ್ಲಿದ್ದಾರೆ. ಈ ವರೆಗೆ ಹಲವಾರು ಉಪನ್ಯಾಸಗಳನ್ನು ನೀಡಿ ಹಲವಾರು ಮಾನಸಿಕ ಕಾಯಿಲೆಗಳಿಂದ ಹೊರಬರಲು ಜನರಿಗೆ ಪ್ರೋತ್ಸಾಹ ನೀಡಿದ್ದಾರೆ. 

 

ಇವರ ಪ್ರಯತ್ನಗಳಿಗೆ ಶುಭವಾಗಲಿ ಎಂದು ಹಾರೈಸೋಣವೇ.

 

ಕೃಪೆ: http://www.magneticman.org

ದ್ವಿಗುಣ ಹಣ ನೀಡಿದ ಎ.ಟಿ.ಎಂ.- ಪೈಜಾಮಾಗಳಲ್ಲೇ ದೌಡಾಯಿಸಿದ ಜನತೆ

January 17, 2009

 

ವೆಲ್ಷ್ ಪೂಲ್, ಇಂಗ್ಲೆಂಡ್: ಇಂಗ್ಲೆಂಡಿನ ವೇಲ್ಸ್ ಪ್ರಾಂತ್ರ್ಯಕ್ಕೆ ಸೇರಿದ ವೆಲ್ಷ್ ಪೂಲ್ ಎಂಬ ಪುಟ್ಟ ಪಟ್ಟಣದ ನಾಗರಿಕರಿಗೆ ಜನವರಿ ಹದಿನೈದನೆಯ ರಾತ್ರಿ ಶುಭರಾತ್ರಿಯಾಗಿ ಪರಿಣಮಿಸಿತ್ತು.  ಶುಭರಾತ್ರಿಯೆಂದರೆ ಯಾವುದೋ ಹಬ್ಬ ಹರಿದಿನವೆಂದಲ್ಲ.  ನಗರದ ಪ್ರಸಿದ್ಧ ಸೇಯ್ನ್ಸ್ ಬರಿ ಸುಪರ್ ಮಾರ್ಕೆಟ್ಟಿನ ಎ.ಟಿ.ಎಂ ಒಂದರಲ್ಲಿ ಏನೋ ಒಂದು ಪ್ರಮಾದವಾಗಿದೆ, ಅದರಲ್ಲಿ ಕಾರ್ಡು ಹಾಕಿ ನೂರು ಪೌಂಡ್ ಕೇಳಿದರೆ ಇನ್ನೂರು ಪೌಂಡ್ ನೀಡುತ್ತದೆ ಎಂದು ಸುದ್ದಿ ಹಬ್ಬಿದ್ದೇ ತಡ, ಜನ ತಾವುಟ್ಟುಕೊಂಡಿದ್ದ ಪೈಜಾಮಾ, ನೈಟ್ ಸೂಟುಗಳಲ್ಲಿಯೇ ತಮ್ಮ ತಮ್ಮ ಕ್ರೆಡಿಟ್ ಕಾರ್ಡು, ಡಿಬಿಟ್ ಕಾರ್ಡುಗಳೊಂದಿಗೆ ದೌಡಾಯಿಸಿದರು.

sainsbury

ಹೇಗೂ ರಾತ್ರಿ ಹೊತ್ತು, ಏ.ಟಿ.ಎಮ್. ತಪ್ಪನ್ನು ಸರಿಪಡಿಸಲು ಬ್ಯಾಂಕಿನವರ ಬರುವುದು ನಾಳೆ ಬೆಳಿಗ್ಗೆ, ಅಷ್ಟರೊಳಗೆ ಸಾಧ್ಯವಾದಷ್ಟು ಹಣವನ್ನು ಪಡೆಯಬಹುದೆಂದು ಬಂದವರು ತಮ್ಮ ಬಂಧು ಬಾಂಧವ ಬಳಗ ಸ್ನೇಹಿತರಿಗೆ ಮೊಬೈಲ್ ಫೋನುಗಳಲ್ಲಿ ಸಂದೇಶ ರವಾನಿಸಿದರು.  ಎ.ಟಿ.ಎಮ್. ಒಡಲಲ್ಲಿರುವ ಹಣ ಖಾಲಿಯಾಗುವ ಮುನ್ನವೇ ಬನ್ನಿರೆಂದು ಧಾವಂತಗೊಳಿಸಿದ್ದರಿಂದ ಅರ್ಧಘಂಟೆಯೊಳಕ್ಕೆ ನಗರದ ಮಧ್ಯಭಾಗದಲ್ಲಿ ರಾತ್ರಿಯುಡುಗೆ ತೊಟ್ಟ ನೂರಾರು ಮಂದಿಯ ಕ್ಯೂ ಜಮಾಯಿಸಿತ್ತು.

ಇತ್ತ ಎ.ಟಿ.ಎಂ. ತನ್ನ ಪಾಡಿಗೆ ದ್ವಿಗುಣ ಹಣವನ್ನು ನೀಡುತ್ತಾ ಆರಾಮವಾಗಿತ್ತು.  ಜನರು ತಮ್ಮ ಕಾರ್ಡುಗಳಿಗಿರುವ ಮಿತಿಯಷ್ಟೂ ಹಣವನ್ನು ಬಾಚಿದ್ದೂ ಬಾಚಿದ್ದೇ, ತಮ್ಮ ಬಾಂಧವರಿಗೆ ಫೋನ್ ಮಾಡಿದ್ದೂ ಮಾಡಿದ್ದೇ. 

ಅಂತೂ ಎ.ಟಿ.ಎಮ್. ಒಡಲು ಬರಿದಾಗುವವರೆಗೆ ಜನರು ಮನಸ್ಸೋ ಇಚ್ಛೆ ಲೂಟಿ ಮಾಡಿ ಸಂತೋಷದಿಂದ ಮನೆಗೆ ನಡೆದಿದ್ದಾರೆ.  ಆ ಸುದ್ದಿ ಬ್ಯಾಂಕಿನವರಿಗೂ ಸಿಕ್ಕಿ ನಿರ್ವಹಣಾ ಘಟಕ ಎ.ಟಿ.ಎಮ್. ಬಳಿಗೆ ಬರುವಷ್ಟರಲ್ಲಿ ಏ.ಟಿ.ಎಮ್. ಖಾಲಿ.  

ನಿಜಕ್ಕೂ ಎ.ಟಿ.ಎಮ್. ಪ್ರೋಗ್ರಾಮಿಂಗ್ ನಲ್ಲಿ ಯಾವುದೋ ದೋಷ ನುಸುಳಿ ಕೇಳಿದ ಹಣದ ದ್ವಿಗುಣ ನೀಡುತ್ತಿತ್ತು. ಆದರೆ ಲೆಕ್ಕಾಚಾರ ಮಾತ್ರ ರಾಮನ ಲೆಕ್ಕ ತೋರಿಸುತ್ತಿತ್ತು.  ಅಂತೂ ಮರುದಿನ ಬೆಳಿಗ್ಗೆ ಎ.ಟಿ.ಎಮ್. ಔಟ್ ಆಫ್ ಆರ್ಡರ್ ಎಂಬ ಪ್ರಿಂಟೌಟ್ ಪುಟವನ್ನು ತನ್ನ ಪರದೆಯ ಮೇಲೆ ಅಂಟಿಸಿಕೊಂಡು ನಿಂತಿತ್ತು.

ಕಳೆದ ರಾತ್ರಿ ದ್ವಿಗುಣ ಹಣ ಪಡೆದವರ ದಾಖಲೆ ಬ್ಯಾಂಕಿನವರ ಹತ್ತಿರ ಇರಬೇಕಲ್ಲವೇ,  ಆ ದಾಖಲೆಗಳನ್ನು ಪರಿಶೀಲಿಸಿ ಎಲ್ಲಾ ಗ್ರಾಹಕರು ಪಡೆದ ಹಣದ ಕ್ರೆಡಿಟ್ ನೋಟ್ ನೀಡಬಹುದಲ್ಲವೇ?  ಈಗ ಬ್ಯಾಂಕ್ ಏನು ಮಾಡುತ್ತದೆ ಎಂದು ಕಾದು ನೋಡಬೇಕು.

ಕೃಪೆ: http://www.countytimes.co.uk

ಮೈಲೇಜ್ ಹೆಚ್ಚಿಸಲು ಮತ್ತೊಮ್ಮೆ ನಿಸರ್ಗದ ಮೊರೆ – ನೆರವಿಗೆ ಬಂದ ಶಾರ್ಕ್

January 16, 2009

 

ಶಾರ್ಕ್ ಮೀನಿಗೂ ಮೈಲೇಜ್ ಹೆಚ್ಚಳಕ್ಕೂ ಯಾವ ಸಂಬಂಧ? ಇಮಾಂಸಾಬಿಗೂ ಗೋಕುಲಾಷ್ಟಮಿಗೆ ಇರುವಷ್ಟೇ ಸಂಬಂಧ ಎಂದು ಲೇವಡಿ ಮಾಡುವವರಿಗೆ ಒಂದು ಕುತೂಹಲಕಾರಿ ವಿಷಯ.  ವಾಹನದ ಮೈಲೇಜ್ ಹೆಚ್ಚಿಸಲು ಶಾರ್ಕ್ ನಿಜಕ್ಕೂ ಪ್ರೇರಣೆ ನೀಡಿದೆ.  ಕೆನಡಾದ ಸ್ಕಿನ್ಝ್ ರಾಪ್ಸ್ ಎನ್ನು ಸಂಸ್ಥೆ ವಾಹನದ ಮೇಲ್ಮೈಯನ್ನು ಶಾರ್ಕ್ ಮೀನಿಗಿರುವ ಮಾದರಿಯಲ್ಲಿ ನಿರ್ಮಿಸಿ ಮೈಲೇಜ್ ಹೆಚ್ಚಳವನ್ನು ಸಾಧಿಸಿ ತೋರಿಸಿದೆ.

ಶಾರ್ಕ್ ಮೀನು ಒಂದು ಅತಿವೇಗದಲ್ಲಿ ಸಾಗುವ ಜಲಚರ.  ಆಹಾರದ ಬೇಟೆಯಾಡಲು ಅದಕ್ಕೆ ವೇಗ ಅತಿಮುಖ್ಯವಾಗಿದೆ.  ನಿಜಕ್ಕೂ ಶಾರ್ಕ್ ಈಜುವುದಿಲ್ಲ, ವಿಮಾನ ಗಾಳಿಯಲ್ಲಿ ತೇಲುವಂತೆ ನೀರಿನಲ್ಲಿ ತೇಲುತ್ತದೆ.  ವಿಮಾನಕ್ಕಿರುವ ರೆಕ್ಕೆಗಳಂತೆಯೇ ಇದಕ್ಕೂ ಎರೆಡು ರೆಕ್ಕೆಗಳಿದ್ದು ಬಾಲವನ್ನು ಅತ್ತಿತ್ತ ಆಡಿಸುವ ಮೂಲಕ ಚಾಲನೆ ಪಡೆಯುತ್ತದೆ.  ಆದರೆ ನೀರೊಳಗಣ ಘರ್ಷಣೆ ಅದರ ವೇಗವನ್ನು ತಗ್ಗಿಸಬೇಕಲ್ಲವೇ, ಆದರೆ ಆಳದಲ್ಲಿಯೂ ಅದು ಸುಲಲಿತವಾಗಿ ವೇಗವಾಗಿ ಈಜುವುದು ಅದರ ಚರ್ಮದ ವಿಶೇಷ ರಚನೆ ಕಾರಣವಾಗಿದೆ.  ಹತ್ತಿರದಿಂದ ಗಮನಿಸಿದರೆ ಅದರ ಚರ್ಮ ಚಿಕ್ಕ ಗೋಲಿಯೊಂದನ್ನು ಒಂದರ ಪಕ್ಕದಲ್ಲೊಂದು ಬರುವಂತೆ ಒತ್ತಿರುವ ಮಾದರಿಯಲ್ಲಿದೆ.  ಗಾಲ್ಫ್ ಚೆಂಡಿನ ಮೇಲ್ಮೈ ಸಹಾ ಇದೇ ರೀತಿಯಲ್ಲಿದೆ.  

ಈ ರಚನೆ ಹೊಂದಿದ ವಸ್ತು (ಅಥವಾ ಜೀವಿ) ನಯವಾದ ಮೇಲ್ಮೈ ಹೊಂದಿರುವ ವಸ್ತುವಿಗಿಂತ (ಅಥವಾ ಜೀವಿಗಿಂತ) ಕಡಿಮೆ ಘರ್ಷಣೆ ಪಡೆಯುತ್ತದೆ.  ಪರಿಣಾಮವಾಗಿ ಹೆಚ್ಚಿನ ದೂರಕ್ಕೆ ಸಾಗಲು ಸಾಧ್ಯವಾಗುತ್ತದೆ.  

ಕೆನಡಾದ ಸಂಸ್ಥೆ ಈ ನಿಟ್ಟಿನಲ್ಲಿ ವಾಹನವೊಂದರ ಮೇಲ್ಮೈಯನ್ನು ಶಾರ್ಕ್ ಮೀನಿನ ಚರ್ಮದ ಮಾದರಿಯಲ್ಲಿ ಚಿಕ್ಕ ಚಿಕ್ಕ ಗುಣಿಗಳಿರುವಂತೆ ರಚಿಸಿ ಪರೀಕ್ಷಾರ್ಥ ಓಡಾಟ ನಡೆಸಿದಾಗ ಅದರ ಮೈಲೇಜಿನಲ್ಲಿ ೧೮ ರಿಂದ ೨೦ ಶೇಖಡಾದಷ್ಟು ಗಮನಾರ್ಹ ಬದಲಾವಣೆ ಕಂಡುಬಂದಿದೆ.

ನಿಜವಾಗಿ ನೋಡಿದರೆ ನಯವಾದ ಮೇಲ್ಮೈ ಕಡಿಮೆ ಪ್ರತಿರೋಧ ಹಾಗೂ ಗುಣಿಗಳುಳ್ಳ ಮೇಲ್ಮೈ ಹೆಚ್ಚಿನ ಪ್ರತಿರೋಧ ಒಡ್ಡಬೇಕು.  ಆದರೆ ವಾಹನ ಹೆಚ್ಚಿನ ವೇಗದಲ್ಲಿದ್ದಾಗ ಗಾಳಿಯ ಕಣಗಳು ಏಕಪ್ರಕಾರವಾಗಿ ಒತ್ತಡವನ್ನು ಹೇರುತ್ತವೆ.  ವಾಹನ ಮುಂದೆ ಸರಿದಾಗ ಹಿಂಬದಿಯಲ್ಲಿ ಸುರುಳಿಯಾಕಾರದಲ್ಲಿ ಸುತ್ತುವ ಗಾಳಿ ಕೊಂಚ ಒತ್ತಡದಲ್ಲಿ ವ್ಯಾತ್ಯಾಸವನ್ನು ತೋರಿ ವಾಹನವನ್ನು ಹಿಂದಕ್ಕೆಳೆಯುತ್ತದೆ. ಪರಿಣಾಮವಾಗಿ ವಾಹನ ಹೆಚ್ಚಿನ ಶಕ್ತಿಯನ್ನು ವ್ಯಯಿಸಬೇಕಾಗುತ್ತದೆ. ಅದೇ ಗುಣಿಗಳಿರುವ ಮೇಲ್ಮೈಯಲ್ಲಿ ಗಾಳಿ ಪ್ರತಿ ಗುಣಿಯಲ್ಲಿ ಹಾದು ಬರಬೇಕಾದುದರಿಂದ ಒತ್ತಡ ಅಸಮಾನವಾಗಿ ಹರಡಿ ವಾಹನದ ಮೇಲೆ ಬೀಳುವ ಒಟ್ಟಾರೆ ಒತ್ತಡ ಕಡಿಮೆಯಾಗುತ್ತದೆ.  ಇದೇ ರೀತಿಯ ಮೇಲ್ಮೈ ಹೊಂದಿರುವ ಗಾಲ್ಫ್ ಚೆಂಡು ಸಹಾ ಗಾಳಿಯಲ್ಲಿ ಅತಿದೂರಕ್ಕೆ ಸಾಗುತ್ತದೆ.

ಗುಣಿಗಳಿರುವ ಮೇಲ್ಮೈಯೊಂದಿಗೆ ಆಕರ್ಷಕ ವಿನ್ಯಾಸವನ್ನು ನೀಡುವ ಮೂಲಕ ವಾಹನಕ್ಕೆ ಹೆಚ್ಚಿನ ಸೌಂದರ್ಯವನ್ನೂ ನೀಡಬಹುದಾಗಿದೆ.  ಅಮೇರಿಕಾದ ಸ್ಕಿನ್ ರಾಪ್ಸ್ ಸಂಸ್ಥೆ ಇದೇ ಕೆಲಸವನ್ನು ಮಾಡುತ್ತಿದೆ.  

ಸುಲಭ, ಸರಳವಾಗಿ ಕಂಡುಬರುವ ಈ ವಿಧಾನವನ್ನು ಅನುಸರಿಸಿ ಭಾರತದಲ್ಲಿಯೂ ಮೈಲೇಜು ಹೆಚ್ಚು ಪಡೆಯಬಹುದಲ್ಲವೇ?

ನೂರಾನಲವತ್ತು ವರ್ಷ ವಯಸ್ಸಿನ ಲಾಬ್ಸ್ಟರ್ ಸಿಗಡಿಗೆ ಜೀವದಾನ

January 11, 2009

lobsterಲಾಬ್ಸ್ಟರ್ ಅಥವಾ ಕಡಲ ಏಡಿ ಎಷ್ಟು ವರ್ಷ ಬಾಳಬಹುದು?  ಬಲಗೆ ಸಿಕ್ಕಿಬಿದ್ದರೆ ಒಂದು ವರ್ಷ ಮಾತ್ರ.  ಆದರೆ ನ್ಯೂಯಾರ್ಕ್ ನಗರದ ಸಿಟಿ ಕ್ರಾಬ್ ಅಂಡ್ ಸೀಫುಡ್ ಎಂಬ ರೆಸ್ಟೋರೆಂಟ್ ಒಂದಕ್ಕೆ ಲಭ್ಯವಾಗಿದ್ದ ಒಂಭತ್ತು ಕೇಜಿ ತೂಕದ ಲಾಬ್ಸ್ಟರ್ ಏಡಿ ಈಗ ಸುದ್ದಿಯಲ್ಲಿದೆ.

ಎರೆಡು ವಾರಗಳ ಹಿಂದೆ ಹಿಡಿಯಲಾಗಿದ್ದ ಈ ಕಡಲ ಏಡಿಗೆ ನೂರು ಡಾಲರ್ ಬೆಲೆ ಕೊಟ್ಟು ಖರೀದಿಸಲಾಗಿದ್ದ ಈ ಕಡಲ ಏಡಿಯನ್ನು ಆಗಲೇ ಫ್ರೈ ಮಾಡಿ ಮಾರಿದ್ದರೆ ನೂರು ಡಾಲರ್ ಲಾಭ ಮಾಡಬಹುದಿತ್ತೇನೋ. ಆದರೆ  ಜಾರ್ಜ್ ಎಂದು ನಾಮಕರಣ ಮಾಡಿ ಹೋಟೆಲ್ ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಹಲವು ಭಾವಚಿತ್ರಗಳನ್ನು ತೆಗೆದು ಪ್ರಕಟಿಸಿದ್ದೇ ತಡ ಪೀಟಾ ( PETA (People for the Ethical Treatment of Animals) ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಬೇಕಾಯ್ತು.

ಕೂಡಲೇ ಕಾರ್ಯಪ್ರವೃತ್ತರಾದ ಕಾರ್ಯಕರ್ತರು ಕಡಲ ಏಡಿಯನ್ನು ಹಿಡಿಯುವುದು ಅಪರಾಧವೆಂದೂ ಆ ಏಡಿ ಹಿಡಿದ ಜಾಗವಾದ ಕೆನ್ನೆಬಂಕ್‍ಪೋರ್ಟ್ ನಲ್ಲಿ ಲಾಬ್ಸ್ಟರ್ ಹಿಡಿಯುವುದು ಕಾನೂನಿಗೆ ವಿರುದ್ಧವೆಂದೂ, ಅದನ್ನು ವಾಪಾಸು ಸಮುದ್ರಕ್ಕೆ ಬಿಡಬೇಕೆಂದೂ ಗಲಾಟೆ ಎಬ್ಬಿಸಿದರು. ಈ ಗಲಾಟೆಯ ಬಳಿಕ ನ್ಯೂಯಾರ್ಕ್ ನ್ಯಾಯಾಲಯ ಈ ಪ್ರಕರಣವನ್ನು ಕೈಗಿತ್ತಿಕೊಂಡು ಏಡಿಯನ್ನು ಅದರ ಮೂಲಸ್ಥಾನಕ್ಕೆ ಮರಳಿಸಬೇಕೆಂದು ತೀರ್ಪಿತ್ತ ಬಳಿಕ ಈಗ ಏಡಿಯನ್ನು ಮೈನೇ ಎಂಬ ಕಡಲತೀರದಲ್ಲಿ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.  ಏಡಿ ಒಟ್ಟು ಹತ್ತು ದಿನಗಳ ಕಾಲ ಟ್ಯಾಂಕ್ ಒಂದರಲ್ಲಿ ಕಾಲ ಕಳೆದಿತ್ತು. 

ಈ ಕಡಲ ಏಡಿಗಳಲ್ಲಿ ಒಂದು ವಿಷೇಶವಿದೆ.  ಬೇರೆ ಜೀವಿಗಳ ಬೆಳವಣಿಗೆ ಒಂದು ಹಂತ ತಲುಪಿದ ಬಳಿಕ ಗರಿಷ್ಟ ಮಟ್ಟ ತಲುಪಿದರೆ ಏಡಿಗಳ (ಕ್ರಸ್ಟೇಶಿಯನ್ಸ್) ಬೆಳವಣಿಗೆಗೆ ಕೊನೆಯೇ ಇಲ್ಲ. ವಯಸ್ಸಾದಂತೆ ಅವುಗಳ ತೂಕ ಮತ್ತು ಗಾತ್ರ ಹೆಚ್ಚುತ್ತಾ ಹೋಗುತ್ತದೆ. ಆ ಏಡಿಯ ತೂಕದಿಂದ ಅದರ ಆಯಸ್ಸನ್ನು ಸ್ಥೂಲವಾಗಿ ಹೇಳಬಹುದಾಗಿದೆ.  ಆ ಪ್ರಕಾರ ಜಾರ್ಜ್ ಏಡಿಯ ವಯಸ್ಸು ನೂರಾನಲವತ್ತು ವರ್ಷ!

ಪೀಟಾ ಕಾರ್ಯಕರ್ತರ ಪ್ರಯತ್ನದಿಂದ ಜಾರ್ಜ್ ತನ್ನ ಸಮುದ್ರತಳದ ಸ್ವಸ್ಥಾನ ತಲುಪಿದೆ.  ಈಗಾಗಲೇ ಶತಾಯುಶಿಯಾಗಿರುವ ಇದು ದ್ವಿಶತಕ ಬಾಳಲಿ ಎಂಬುದೇ ನಮ್ಮ ಹಾರೈಕೆ.

 

ಕೃಪೆ: ಬಿಬಿಸಿ.

January 4, 2009

ವಿಶ್ವದ ಅತ್ಯಂತ ಬಲಿಷ್ಠ ಬಾಲಿಕೆ : ವಾರ್ಯಾ ಅಕುಲೋವಾ


ಉತ್ತಮ ದೇಹದಾರ್ಢ್ಯತೆ ಹೊಂದಿರುವ ಪುರುಷರು ಈ ಲೋಕದಲ್ಲಿ ಬೇಕಾದಷ್ಟಿದ್ದಾರೆ.  ಆದರೆ ಮಹಿಳೆಯರಲ್ಲಿ ಇದು ಕಡಿಮೆ. ಅದರಲ್ಲೂ ಕೋಮಲಾಂಗವೇ ಸ್ತ್ರೀಲಕ್ಷಣವಾಗಿರುವಾಗ ಬಲಿಷ್ಠ ತನುವನ್ನು ಹೊಂದುವುದು ಹೆಚ್ಚಿನವರ ಅಪೇಕ್ಷೆಗೆ ದೂರ. 

ಇದಕ್ಕೆ ಅಪವಾದವೆನ್ನುವಂತೆ ಕೆಲವು ಮಹಿಳೆಯರು ಕಸರತ್ತು ಮಾಡಿ ಉತ್ತಮ ದೇಹದಾರ್ಢ್ಯತೆಯನ್ನು ಹೊಂದಿ ತಾವೂ ಪುರುಷರಿಗೆ ಕಡಿಮೆಯಿಲ್ಲ ಎಂದು ತೋರುವುದು ಹಲವೆಡೆ ಕಂಡುಬರುತ್ತಿದೆ. ನಿಧಾನವಾಗಿ ಸ್ತ್ರೀ ಬಲಪ್ರಧಾನ ಹಾಗೂ ಪುರುಷಪ್ರಧಾನ ಕ್ಷೇತ್ರಗಳಲ್ಲೂ ಲಗ್ಗೆಯಿಡುತ್ತಿದ್ದಾಳೆ.

ಆದರೆ ಸಾಮಾನ್ಯ ಮೈಕಟ್ಟನ್ನು ಹೊಂದಿ ತನ್ನ ತೂಕದ ಸುಮಾರು ಒಂಭತ್ತುಪಟ್ಟು ತೂಕವನ್ನು ಹೊರಬಲ್ಲ ಬಾಲಕಿಯೊಬ್ಬಳು ಈಗ ವಿಶ್ವದಾಖಲೆ ಸ್ಥಾಪಿಸಿದ್ದಾಳೆ.  ಉಕ್ರೇನ್ ದೇಶದ ಕ್ರಿವೋಯ್ ರೋಗ್ ಎಂಬ ಗಣಿಗಾರಿಕೆ ಮುಖ್ಯವಾಗಿರುವ ಪುಟ್ಟ ಪಟ್ಟಣದಲ್ಲಿ ವಾಸಿಸುವ ಯೂರಿ ಅಕುಲೋವ್ ಹಾಗೂ ಲಾರಿಸಾ ಅಕುಲೋವ್ ದಂಪತಿಗಳಿಗೆ ೧೯೯೨ರಲ್ಲಿ ಹುಟ್ಟಿದ ವಾರ್ಯಾ ಅಕುಲೋವ್ ಎಂಬ ಹದಿಹರೆಯದ ಹುಡುಗಿ ತನ್ನ ತೂಕದ (ನಲವತ್ತು ಕೇಜಿ) ಸುಮಾರು ಒಂಭತ್ತು ಪಟ್ಟು ಹೆಚ್ಚು ತೂಕ (ಮುನ್ನೂರೈವತ್ತು ಕೇಜಿ) ಎತ್ತಬಲ್ಲ ಕ್ಷಮತೆ ತೋರಿ ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾಳೆ.  ಪ್ರಸ್ತುತ ಅತ್ಯಂತ ಹೆಚ್ಚಿನ ಭಾರ ಎತ್ತುವ ಮಹಿಳೆಯಾಗಿ ಗಿನ್ನೆಸ್ ದಾಖಲೆ ಸ್ಥಾಪಿಸಿ ವಿಶ್ವವಿಖ್ಯಾತಳಾಗಿದ್ದಾಳೆ.

ಆದರೆ ಈ ಬಾಲಕಿಯ ವಿಸ್ಮಯಶಕ್ತಿಯ ಪರಿಚಯವಾಗಿದ್ದೂ ಒಂದು ಆಕಸ್ಮಿಕ.  ಆಕೆಯು ಚಿಕ್ಕವಳಿದ್ದಾಗ ಕಡುಬಡತನದಲ್ಲಿ ಬಳಲುತ್ತಿದ್ದ ಕುಟುಂಬಕ್ಕೆ ಜೀವನ ನಿರ್ವಹಣೆಗೆ ಸರ್ಕಸ್ ಒಂದರಲ್ಲಿ ಪ್ರದರ್ಶನ ನೀಡುವುದು ಅನಿವಾರ್ಯವಾಯಿತು.  ತಂದೆ ತಾಯಿ ಮಗಳ ತಂಡ ಅಕ್ರೋಬ್ಯಾಟಿಕ್ ಪ್ರದರ್ಶನ ನೀಡಿ ಜೀವನ ನಿರ್ವಹಿಸುತ್ತಿದ್ದರು. ಪ್ರತಿ ಪ್ರದರ್ಶನಕ್ಕೆ ಅವರಿಗೆ ಸಂದಾಯವಾಗುತ್ತಿದ್ದ ವೇತನ ಕೇವಲ ಹತ್ತು ಡಾಲರ್.  ಗಣಿಕಾರ್ಮಿಕರ ಶಿಬಿರದಲ್ಲಿದ್ದ ಒಂದು ಎಂಟು ಮೀಟರ್ ಅಗಲದ ಕೋಣೆಯೇ ಅವರ ವಾಸಗೃಹ.  ಆದರೆ ತನ್ನ ಮಗಳು ಅತ್ಯುತ್ತಮ ಅಥ್ಲೀಟ್ ಆಗಬೇಕೆಂದು ಅಪೇಕ್ಷಿಸಿದ ಆಕೆಯ ತಂದೆ ಹಾಗೂ ತರಬೇತುದಾರ ಯೂರಿಯವರು ಪಕ್ಕದ ಒಂದು ಕೋಣೆಯಲ್ಲಿ ನಿಯಮಿತವಾಗಿ ತರಬೇತಿ ನೀಡಲು ಪ್ರಾರಂಭಿಸಿದರು.  ಕೊಂಚ ಕಾಲದ ಬಳಿಕ ತೂಕಗಳನ್ನು ಎತ್ತಿ ವ್ಯಾಯಾಮ ಮಾಡಲು ಪ್ರಾರಂಭಿಸಿದರು.  ನಿಧಾನಕ್ಕೆ ಹೆಚ್ಚು ಹೆಚ್ಚು ತೂಕಗಳನ್ನು ಎತ್ತುತ್ತಾ ಹೋದ ವಾರ್ಯಾ ಅದ್ಯಾವುದೋ ಶಕ್ತಿ ಆವರಿಸಿಕೊಂಡಂತೆ ದೊಡ್ಡ ಪಹಿಲ್ವಾನರಿಗೂ ಕಷ್ಟಕರವಾದ ತೂಕಗಳನ್ನು ಲೀಲಾಜಾಲವಾಗಿ ಎತ್ತಲು ಪ್ರಾರಂಭಿಸಿದಳು. ನಿಧಾನಕ್ಕೆ ಏರಿಸಿಕೊಳ್ಳುತ್ತಾ ಹೋದ ತೂಕ ಈಗ ಮುನ್ನೂರೈವತ್ತು ಕೇಜಿಗಳಿಗೆ ತಲುಪಿದೆ.

ಈಕೆಯ ಕ್ಷಮತೆಯನ್ನು ಎರೆಡು ಬಾರಿ ಪರಾಮರ್ಶಿಸಿದ ಗಿನ್ನಿಸ್ ದಾಖಲೆ ತಂಡ ಈಕೆಯೇ ವಿಶ್ವದ ಅತ್ಯಂತ ಬಲಿಷ್ಠ ಬಾಲಕಿಯೆಂದು ದಾಖಲೆ ಧೃಢೀಕರಣ ಪತ್ರ ನೀಡಿದೆ.  ಆದರೆ ಈಕೆ ನಿಜವಾಗಿಯೂ ಹೊರಬಲ್ಲ ಕ್ಷಮತೆಯ ಇದು ಕೇವಲ ಮುಕ್ಕಾಲು ಪಾಲು ಮಾತ್ರ, ನಿಜವಾಗಿ ಆಕೆ ಇನ್ನೂ ಹೆಚ್ಚು ಭಾರ ಹೊರಬಲ್ಲವಳಾಗಿದ್ದಾಳೆ, ಆದರೆ ಆಕೆಯ ಆರೋಗ್ಯದ ದೃಷ್ಟಿಯಿಂದ ರಿಸ್ಕ್ ತೆಗೆದುಕೊಳ್ಳಲಾರೆ ಎಂದು ಆಕೆಯ ತಂದೆ ಹೆಮ್ಮೆಯಿಂದ ನುಡಿಯುತ್ತಾರೆ.

ಭಾರ ಎತ್ತುವಿಕೆಯಲ್ಲಿ ಅಪ್ರತಿಮ ಸಾಮರ್ಥ್ಯ ಹೊಂದಿರುವ ಈಕೆ ಶಾಲೆಯ ಪಾಠಗಳಲ್ಲೂ ಮುಂದೆ.  ಭವಿಷ್ಯದಲ್ಲಿ ಒಲಿಂಪಿಕ್ ಕ್ರೀಡೆಗಳಲ್ಲಿ ಭಾಗವಹಿಸಿ ದೇಶಕ್ಕೆ ಪದಕ ಹಾಗೂ ಕೀರ್ತಿ ತರುವ ದಿಸೆಯಲ್ಲಿ ವಾರ್ಯಾ ಹಾಗೂ ಆಕೆಯ ಕುಟುಂಬ ಕಾರ್ಯನಿರತವಾಗಿದೆ. ಅವರಿಗೆ ಶುಭ ಹಾರೈಸೋಣವೇ

ಕೃಪೆ: http://www.varyaakulova.com/